

ಬೆಂಗಳೂರು: ಮುಂದಿನ ಐದು ವರ್ಷದ ಅವಧಿಯೊಳಗೆ ಭಾರತವು ನಿರ್ಮಾಣ ಕ್ಷೇತ್ರದಲ್ಲಿ ವಿಶ್ವದ ನಂಬರ್ ಒನ್ ಸ್ಥಾನಕ್ಕೇರಲು ಎಲ್ಲ ಅವಕಾಶಗಲು ಇವೆ. ಇದನ್ನು ಸಾಕಾರ ಮಾಡಲು ಮೂಲಸೌಕರ್ಯ ಒಳಗೊಂಡ ನಿರ್ಮಾಣ ವಲಯದ ಪಾಲುದಾರರಿಗೆ ಸರ್ಕಾರ ಎಲ್ಲ ಅಗತ್ಯ ಸಹಕಾರ ನೀಡಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದರು.
ನಗರದ ತುಮಕೂರು ರಸ್ತೆಯ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಭಾರತೀಯ ಕೈಗಾರಿಕೆಗಳ ಮಹಾಒಕ್ಕೂಟ (ಸಿಐಐ) ಸಹಯೋಗದಲ್ಲಿ ಮಂಗಳವಾರ ಆರಂಭವಾದ ಐದು ದಿನಗಳ ಏಷ್ಯಾದ ಅತಿ ದೊಡ್ಡ ಪ್ರದರ್ಶನ ‘ಎಕ್ಸ್‌ಕಾನ್-2023’ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಮೂಲಸೌಕರ್ಯ ಕ್ಷೇತ್ರವು ದೊಡ್ಡ ಮಟ್ಟದಲ್ಲಿ ಪ್ರಗತಿ ಸಾಧಿಸುತ್ತಿದೆ. ಇದಕ್ಕೆ ಪೂರಕವಾಗಿ ಯಂತ್ರೋಪಕರಣ ತಯಾರಿಕೆ ಒಳಗೊಂಡ ನಿರ್ಮಾಣ ಕ್ಷೇತ್ರವೂ ಅಷ್ಟೇ ವೇಗವಾಗಿ ಬೆಳವಣಿಗೆಯನ್ನು ದಾಖಲಿಸುತ್ತಿದೆ. ಪ್ರಸ್ತುತ ಮೂರನೇ ಸ್ಥಾನದಲ್ಲಿರುವ ನಿರ್ಮಾಣ ಕ್ಷೇತ್ರವು ತನ್ನ ರ್ತು ಪ್ರಮಾಣವನ್ನು ಹೆಚ್ಚಿಸಿಕೊಂಡು ಮೊದಲನೇ ಸ್ಥಾನಕ್ಕೇರಬೇಕು. ಇದಕ್ಕಾಗಿ ಸರ್ಕಾರ ಎಲ್ಲ ರೀತಿಯ ಪ್ರೋತ್ಸಾಹ ನೀಡಲಿದ್ದು, ಉದ್ದಿಮೆದಾರರು ಸಂಶೋಧನೆ, ತಂತ್ರಜ್ಞಾನ ಬಳಕೆ ಹಾಗೂ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಮುತುವರ್ಜಿ ವಹಿಸಿದರೆ ನಿರ್ಮಾಣ ಕ್ಷೇತ್ರದ ಮೇಲೆ ಭಾರತ ಹಿಡಿತ ಹೊಂದಬಹುದು ಎಂದು ಪ್ರತಿಪಾದಿಸಿದರು.
ಹಸಿರು ಇಂಧನ ಆರ್ಥಿಕತೆಗೆ ವರ:
ಭಾರತ ಪ್ರತೀ ವರ್ಷ 16 ಲಕ್ಷ ಕೋಟಿ ಮೊತ್ತದಷ್ಟು ತೈಲೋತ್ಪನ್ನವನ್ನು ಆಮದು ಮಾಡಿಕೊಳ್ಳುತ್ತಿದೆ. ಇದರಲ್ಲಿ ಡೀಸೆಲ್ ಹೆಚ್ಚು ಪ್ರಮಾಣದಲ್ಲಿ ಬಳಕೆಯಾಗುತ್ತಿದ್ದು, ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಗಣಿಗಾರಿಕೆ ಕ್ಷೇತ್ರ ಒಂದರಲ್ಲೇ ವಾರ್ಷಿಕ 400 ಕೋಟಿ ರೂ. ಮೊತ್ತದ ಡೀಸೆಲ್ ಬಳಕೆ ಮಾಡಲಾಗುತ್ತಿದೆ. ಜನರೇಟರ್ ಬಳಕೆಗೂ ಹೆಚ್ಚಿನ ಪ್ರಮಾಣದ ಡೀಸೆಲ್ ಬಳಸಲಾಗುತ್ತಿದೆ. ಡೀಸೆಲ್ ಜತೆಗೆ ಮಿಥನಾಲ್ ಅಥವಾ ಇಥೆನಾಲ್ ಮಿಶ್ರಣ ಬಳಸುವುದರಿಂದ ತೈಲ ಬಳಕೆ ಕಡಿಮೆ ಮಾಡಬಹುದು. ಹಸಿರು ಇಂಧನ ಬಳಕೆಯನ್ನು ಮುನ್ನೆಲೆಗೆ ತರಲು ಉದ್ದಿಮೆದಾರರ ನಿರ್ಧರಿಸಿದ್ದಲ್ಲಿ, 2070ರ ವೇಳೆಗೆ ರಾಷ್ಟ್ರವು ಶೂನ್ಯ ಇಂಗಾಲ ಗುರಿ ಸಾಧಿಸಬಹುದು ಎಂದು ಗಡ್ಕರಿ ಹೇಳಿದರು.
ಕಾರ್ಯಕ್ರಮದಲ್ಲಿ ಸಿಐಐ ಡಿಜಿ ಚಂದ್ರಜಿತ್ ಬ್ಯಾನರ್ಜಿ, ಭಾರತೀಯ ನಿರ್ಮಾಣ ಕ್ಷೇತ್ರದ ಯಂತ್ರೋಪಕರಣಗಳ ತಯಾರಕರ ಸಂಘದ ಅಧ್ಯಕ್ಷ ವಿವೇಕಾನಂದ ವಿ ಹಾಗೂ ಇತರರು ಹಾಜರಿದ್ದರು.
ಯಂತ್ರಗಳ ಬಳಕೆಗೆ ಎಫ್ಪಿಒ ಮಾದರಿ:
ನಿರ್ಮಾಣ ಕ್ಷೇತ್ರದಲ್ಲಿ ಹೊಸ ಬಗೆಯ ಯಂತ್ರೋಪಕರಣಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇವುಗಳನ್ನು ಎಲ್ಲರೂ ಖರೀದಿಸಿ ಬಳಸಿಕೊಳ್ಳಲು ಸಾಧ್ಯವಾಗದು. ನಿರ್ಮಾಣ ಕ್ಷೇತ್ರವು ಕಾಲಮಿತಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಬೇಕಿರುವ ಕಾರಣ ರೈತ ಉತ್ಪಾದಕ ಸಂಘಗಳ (ಎಫ್ಪಿಒ) ಮಾದರಿಯಲ್ಲಿ ಯಂತ್ರೋಪಕರಣಗಳನ್ನು ವಿವಿಧ ಉದ್ದಿಮೆದಾರರು ಹಂಚಿಕೊಂಡು ಬಳಕೆ ಮಾಡಿಕೊಳ್ಳಬಹುದು. ವಿಶ್ವವಿದ್ಯಾಲಯಗಳಲ್ಲಿ ನಿರ್ಮಾಣ ಕ್ಷೇತ್ರಕ್ಕೆ ಸಂಬಂಧಿಸಿ ಹೊಸ ಕೋರ್ಸ್ ಕಲಿಕೆ, ತರಬೇತಿಗೂ ಅವಕಾಶ ಮಾಡಿಕೊಡಬೇಕಿದೆ ಎಂದು ಸಚಿವ ಗಡ್ಕರಿ ಸಲಹೆ ನೀಡಿದರು.
ಇಲೆಕ್ಟ್ರಿಕ್ ಎಕ್ಸ್‌ಕವೇಟರ್ ಲೋಕಾರ್ಪಣೆ:
ದೇಶದಲ್ಲೇ ಮೊದಲ ಬಾರಿಗೆ ಸ್ವದೇಶಿ ಮಾದರಿಯಲ್ಲಿ ನಿರ್ಮಿಸಿರುವ ಇಲೆಕ್ಟ್ರಿಕ್ ಎಕ್ಸ್‌ಕವೇಟರ್ ಅನ್ನು ಮೇಳದಲ್ಲಿ ಲೋಕಾರ್ಪಣೆ ಮಾಡಲಾಯಿತು. ಟಾಟಾ ಹಿಟಾಕಿ ಕಂಪನಿ ತಯಾರಿಸಿರುವ ಈ ಭಾರಿ ಯಂತ್ರವನ್ನು ಗಣಿಗಾರಿಕೆಯಲ್ಲಿ ಬಳಸಬಹುದಾಗಿದೆ. ಇದೇ ರೀತಿ ವಿವಿಧ ವಲಯಗಳಲ್ಲಿ ವಿದ್ಯುತ್‌ಚಾಲಿತ ಯಂತ್ರೋಪಕರಣಗಳನ್ನು ಉತ್ಪಾದಿಸಿ ರ್ತು ಮಾಡುವಂತೆ ಸಚಿವ ಗಡ್ಕರಿ ಆಶಿಸಿದರು.