

ಇಂಡಿ: ನರೇಂದ್ರ ಮೋದಿಯವರು ದೇಶದ ಪ್ರಧಾನಿ ಆಗಿ ಅಧಿಕಾರ ಸ್ವೀಕರಿಸಿದ ನಂತರ ರೈತರಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಪ್ರಧಾನಿ ಆದಾಗಿನಿಂದ ವಿಶ್ವದಲ್ಲಿಯೇ ಭಾರತ ಬಲಾಢ್ಯ ದೇಶವಾಗಿ ಮುನ್ನಡೆಯುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ ಹೇಳಿದರು.
ಪಟ್ಟಣದ ದೇಸಾಯಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ವತಿಯಿಂದ ಹಮ್ಮಿಕೊಂಡ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು.
ರೈತರ ಅನುಕೂಲಕ್ಕಾಗಿ ಪ್ರಧಾನಿ ಮೋದಿಯವರು ದಲ್ಲಾಳಿಗಳ ಹಾವಳಿ ತಪ್ಪಿಸುವ ಸಲುವಾಗಿ ಅವರ ಖಾತೆಗಳಿಗೇ ನೇರವಾಗಿ ಹಣ ಜಮಾ ಮಾಡಿರುವುದು, ಕೋವಿಡ್ ಸಮಯದಲ್ಲಿ ದೇಶ ಆರ್ಥಿಕ ಸಂಕಷ್ಟದಲ್ಲಿದ್ದರೂ 137 ಕೋಟಿ ಜನರಿಗೆ ಲಸಿಕೆಯನ್ನು ಉಚಿತವಾಗಿ ನೀಡಿ ಜನರ ಆರೋಗ್ಯ ಸಂರಕ್ಷಣೆಗೆ ಮುಂದಾಗಿರುವುದು ಸ್ತುತ್ಯಾರ್ಹ ಎಂದರು.
ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಿದ್ದು ಬುಳ್ಳಾ, ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ ಮಾತನಾಡಿದರು.
ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ರಾಜು ಕಾಡೆ, ಇಂಡಿ ಮಂಡಲ ರೈತ ಮೋರ್ಚಾ ಅಧ್ಯಕ್ಷ ಸಿದ್ದಲಿಂಗ ಹಂಜಗಿ, ಅನೀಲ ಜಮಾದಾರ, ರಾಜು ಸಗಾಯಿ, ಹನುಮಂತಗೌಡ ಪಾಟೀಲ, ಭೀಮಸಿಂಗ ರಾಠೋಡ, ರಜನಿಕಾಂತ ಕಲ್ಲೂರ, ಭೀಮಾಶಂಕರ ಆಳೂರ, ಯಲ್ಲಪ್ಪ ಹದರಿ ಇತರರಿದ್ದರು.