

ಇಂಡಿ: ಪಟ್ಟಣದಲ್ಲಿ ಅಲ್ಲಲ್ಲಿ ಇರುವ ಕೊಳಚೆ ಪ್ರದೇಶಗಳನ್ನು ಸ್ವಚ್ಛಗೊಳಿಸುವುದು, ಕಾಯಿಪಲ್ಲೆ, ಹಣ್ಣು ಮಾರುಕಟ್ಟೆಯನ್ನು ಮೆಗಾ ಮಾರುಕಟ್ಟೆಯ ಕೆಳಗಡೆ ಆಯೋಜಿಸಲು ಯೋಜನೆ ರೂಪಿಸಲಾಗುವುದು ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹಾಗೂ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಜಂಟಿಯಾಗಿ ಹೇಳಿದರು.
ಪಟ್ಟಣದಲ್ಲಿ ಹೊಸದಾಗಿ ನಿರ್ಮಿಸಿದ ಮೆಗಾ ಮಾರುಕಟ್ಟೆ ಹಾಗೂ ಅದರ ಪಕ್ಕದಲ್ಲಿಯ ಕೊಳಚೆ ಪ್ರದೇಶವನ್ನು ಬುಧವಾರ ಪರಿಶೀಲಿಸಿ ಅವರು ಮಾತನಾಡಿದರು.
ಮೆಗಾ ಮಾರುಕಟ್ಟೆಯ ಎದುರಿಗೆ (ಇಂಡಿ ಬಸ್ ನಿಲ್ದಾಣದಿಂದ ಸ್ಟೇಶನ್ ರಸ್ತೆಗೆ) ಇರುವ ಮುಖ್ಯರಸ್ತೆಗೆ ಮಾರ್ಗ ಕಲ್ಪಿಸಿಕೊಟ್ಟು ಮಾರುಕಟ್ಟೆಯ ಕೆಳಗಡೆ ನಿರ್ಮಿಸಲು ಉದ್ದೇಶಿಸಿರುವ ಕಾಯಿಪಲ್ಲೆ, ಹಣ್ಣು ಮಾರುಕಟ್ಟೆಗೆ ಹೋಗಿಬರಲು ಮೆಗಾ ಮಾರುಕಟ್ಟೆಗೆ ಇನ್ನೂ ಮೂರು ಕಡೆ ಹೆಬ್ಬಾಗಿಲು ನಿರ್ಮಿಸುವುದು, ವಾಹನಗಳ ನಿಲುಗಡೆಗೆ ವ್ಯವಸ್ಥೆ, ಕೊಳಚೆ ಪ್ರದೇಶ ಸ್ವಚ್ಛಗೊಳಿಸುವುದು, ಹಳೇ ಸರ್ಕಾರಿ ಆಸ್ಪತ್ರೆಯಲ್ಲಿರುವ ಹಳೆಯ ಕಟ್ಟಡಗಳನ್ನು ನೆಲಸಮಗೊಳಿಸಿ ಮೆಗಾ ಮಾರುಕಟ್ಟೆಗೆ ಕಾಂಪೌಂಡ್ ಗೋಡೆ ನಿರ್ಮಿಸುವುದು, ಕುಡಿಯುವ ನೀರಿನ ವ್ಯವಸ್ಥೆ ಮುಂತಾದ ಕೆಲಸಗಳನ್ನು ಶೀಘ್ರದಲ್ಲಿಯೇ ಮಾಡಲಾಗುವುದು ಎಂದರು.
ಈ ವ್ಯವಸ್ಥೆಯಿಂದ ಇಂಡಿ-ಸಿಂದಗಿ, ಇಂಡಿ- ವಿಜಯಪುರ ರಸ್ತೆ, ಇಂಡಿ- ಅಗರಖೇಡ ರಸ್ತೆ ಮತ್ತು ಇಂಡಿ-ಸ್ಟೇಶನ್ ರಸ್ತೆಗಳಲ್ಲಿ ಇನ್ನು ಮುಂದೆ ಯಾವುದೇ ಒತ್ತುವ ಗಾಡಿಗಳಲ್ಲಿ, ಪಾದಚಾರಿ ಮಾರ್ಗಗಳಲ್ಲಿ, ರಸ್ತೆಯ ಮೇಲೆ ಕಾಯಿಪಲ್ಲೆ, ಹಣ್ಣು ಮತ್ತು ಇತರ ವಸ್ತುಗಳನ್ನು ಮಾರಾಟ ಮಾಡುವ ಪ್ರಶ್ನೆ ಬರುವುದಿಲ್ಲ. ಇಂಡಿ ನಾಗರಿಕರಿಗೆ ಕಾಯಿಪಲ್ಲೆ, ಹಣ್ಣು ಒಂದೇ ಕಡೆ ಸಿಗುವಂತಾಗುತ್ತದೆ. ಅಲ್ಲದೇ ಮೆಗಾ ಮಾರುಕಟ್ಟೆಯೂ ಇಲ್ಲೇ ಇರುವುದರಿಂದ ಎಲ್ಲ ವ್ಯಾಪಾರ ವ್ಯವಹಾರ ಇಲ್ಲಿಯೇ ನಡೆಯುತ್ತದೆ. ಹೆಚ್ಚಿನ ಜನ ಇಲ್ಲಿಗೆ ಬಂದುಹೋಗಲು ಅಗತ್ಯವಿರುವ ಸೌಲಭ್ಯಗಳನ್ನು ಮಾಡಿಕೊಡಲಾಗುವುದು ಎಂದರು.
ಪಟ್ಟಣದಲ್ಲಿ ಪಾದಚಾರಿಗಳು, ವಾಹನ ಸವಾರರಿಗೆ ಮುಕ್ತವಾದ ಅವಕಾಶ ಕಲ್ಪಿಸಿಕೊಡುವುದಲ್ಲದೆ ಸುಂದರ ನಗರವನ್ನಾಗಿ ಮಾಡಲು ಪ್ರಯತ್ನಿಸಲಾಗುವುದು. ಪಟ್ಟಣದ ಪ್ರತಿಯೊಂದು ವೃತ್ತದಲ್ಲಿ ಸಿಗ್ನಲ್ ವ್ಯವಸ್ಥೆ, ನಾಲ್ಕು ಚಕ್ರಗಳ ವಾಹನಗಳಿಗೆ ನಿಲುಗಡೆಯ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು. ಈ ಯೋಜನೆಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಕಂದಾಯ ಉಪವಿಭಾಗಾಧಿಕಾರಿ ಹಾಗೂ ಪುರಸಭೆ ಮುಖ್ಯಾಧಿಕಾರಿ ಮನವಿ ಮಾಡಿದರು.