ವೃದ್ಧರ ಕಾಳಜಿಗೆ ಆದ್ಯತೆ ನೀಡಿ

Indi, Revenue Sub-Divisional Officer, Abid Gadyala, Elderly Care, Pension,
ಇಂಡಿ ಪಟ್ಟಣದಲ್ಲಿ ಉಪ ಕಂದಾಯ ವಿಭಾಗಾಧಿಕಾರಿ ಅಬೀದ್ ಗದ್ಯಾಳ ನಿವೃತ್ತ ನೌಕರರ ಸಂಘದ ಭವನ ಉದ್ಘಾಟಿಸಿದರು. ಅಂಬಣ್ಣ ಸುಣಗಾರ, ಕೆ.ಡಿ.ಪಾಟೀಲ, ಎಸ್.ಆರ್.ಪೋಳ ಇತರರಿದ್ದರು.
Published on

ಇಂಡಿ: ಮಕ್ಕಳು ತಮ್ಮ ವೃದ್ಧ ತಂದೆ ತಾಯಿಗಳಿಗೆ ಸರಿಯಾಗಿ ನೋಡದಿದ್ದರೆ ನೇರವಾಗಿ ಇಂಡಿ ಪಟ್ಟಣದಲ್ಲಿರುವ ಉಪ ಕಂದಾಯ ವಿಭಾಗಾಧಿಕಾರಿ ಕಚೇರಿಗೆ ದೂರು ನೀಡಿದರೆ ಅವರ ಸಂರಕ್ಷಣೆ ನಾನು ಮಾಡುತ್ತೇನೆ. ಅವರ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುತ್ತೇನೆ ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಭರವಸೆ ನೀಡಿದರು.

ಪಟ್ಟಣದಲ್ಲಿ ನಿವೃತ್ತ ನೌಕರರ ಸಂಘದ ಸಭಾಭವನವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ನಿವೃತ್ತರ ಪಿಂಚಣಿ ತೆಗೆದುಕೊಳ್ಳುವ ಮಕ್ಕಳು ಅವರ ಯೋಗಕ್ಷೇಮ ನೋಡದಿದ್ದರೆ, ಇಲ್ಲವೇ ತಂದೆ ತಾಯಿಯ ಆಸ್ತಿ ಕಿತ್ತುಕೊಂಡು ಅವರಿಗೆ ಸರಿಯಾಗಿ ನೋಡದಿದ್ದರೆ ಮುಲಾಜಿಲ್ಲದೆ ಎಸಿ ಕಚೇರಿಗೆ ದೂರು ನೀಡಬಹುದು. ದೂರು ನೀಡಿದ ತಕ್ಷಣವೇ ತಂದೆ-ತಾಯಿ ಆಸ್ತಿಯನ್ನು ಮರಳಿ ಅವರಿಗೆ ಸಿಗುವಂತೆ ಮಾಡುತ್ತೇನೆ ಎಂದರು.

ವೃದ್ಧರು ನಮ್ಮ ಸಮಾಜದ ಆಸ್ತಿ. ಅವರ ಅನುಭವಗಳು ಪ್ರತಿ ಸಮಾಜಕ್ಕೆ ಅತ್ಯಗತ್ಯ. ಕಾರಣ ವೃದ್ಧರನ್ನು ಯಾರೂ ಕಡೆಗಣಿಸಬಾರದು. ಒಂದು ಮರ ಚಿಗುರಲು ಅದಕ್ಕೆ ಬೇರುಗಳು ಹೇಗೆ ಮುಖ್ಯವೋ ಅದರಂತೆ ಒಂದು ಸಮಾಜ ಸುರಕ್ಷಿತವಾಗಿ ಕೆಲಸ ಮಾಡಲು ನಿವೃತ್ತರು ಹಾಗೂ ಗ್ರಾಮದ ಹಿರಿಯರ ಅನುಭವದ ಮಾರ್ಗದರ್ಶನ ಮುಖ್ಯವಾಗಿದೆ. ಕಾರಣ ನಮ್ಮ ನಮ್ಮ ಹಿರಿಯರಿಗೆ ಗೌರವದಿಂದ ಕಾಣಬೇಕು, ಅವರ ಯೋಗಕ್ಷೇಮ ಮಾಡಬೇಕು ಎಂದು ಸಲಹೆ ನೀಡಿದರು.

ನಿವೃತ್ತ ನೌಕರರಿಗೆ ಈಗ ನೀಡಿದ ಸಭಾಭವನದ ಅತಿ ಚಿಕ್ಕದಾಗಿದೆ. ಮುಂದಿನ ದಿನಗಳಲ್ಲಿ ತಾಲೂಕು ಕೇಂದ್ರದಲ್ಲಿ ಯಾವುದಾದರೂ ಸ್ಥಳಾವಕಾಶವಿದ್ದರೆ, ಅದನ್ನು ಪತ್ತೆಹಚ್ಚಿ ಮಂಜೂರು ಮಾಡಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಅಂಬಣ್ಣ ಸುಣಗಾರ, ಕೆ.ಡಿ.ಪಾಟೀಲ ಮಾತನಾಡಿದರು. ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್.ಆರ್.ಪೋಳ ಅಧ್ಯಕ್ಷತೆ ವಹಿಸಿದ್ದರು.ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಎಸ್.ವಿ.ಹೂಗಾರ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net