

ಇಂಡಿ: ಭಾರತ ದೇಶಕ್ಕೆ ಕಾಂಗ್ರೆಸ್ ಕೊಡುಗೆ ಅಪಾರವಾಗಿದೆ. ಪಕ್ಷದ ಪ್ರಧಾನಿಗಳು, ರಾಜ್ಯದ ಮುಖ್ಯಮಂತ್ರಿಗಳು ಪಕ್ಷ, ದೇಶ, ರಾಜ್ಯದ ಅಭಿವೃದ್ಧಿಗಾಗಿ ಅನನ್ಯ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಸ್ವಾತಂತ್ರೊೃೀತ್ಸವ ನಿಮಿತ್ತ ಇಂಡಿ ಹಾಗೂ ಬಳ್ಳೊಳ್ಳಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಂಡಿ ರೈಲ್ವೆ ನಿಲ್ದಾಣದ ಹನುಮಾನ ಮಂದಿರದಿಂದ ಪಟ್ಟಣದ ಶಂಕರ ಪಾರ್ವತಿ ಸಭಾಂಗಣದವರೆಗೆ ಮಂಗಳವಾರ ಹಮ್ಮಿಕೊಂಡಿದ್ದ ಭಾರತ ಜೋಡೊ ಪಾದಯಾತ್ರೆ ಸಮರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಪ್ರಧಾನಿಗಳಾದ ಜವಾಹರಲಾಲ್ ನೆಹರೂ ಅವರ ಪಂಚಶೀಲ ತತ್ವ ಮತ್ತು ಹಸಿರು ಕಾಂತ್ರಿ, ಶಾಸಿಯವರ ಶಾಂತಿ, ಆದರ್ಶ, ಇಂದಿರಾ ಗಾಂಧಿ ಅವರ ಬ್ಯಾಂಕು ರಾಷ್ಟ್ರೀಕರಣ, ರಾಜೀವ ಅವರ ಮಾಹಿತಿ ತಂತ್ರಜ್ಞಾನ, ದೂರದರ್ಶನ ಮತ್ತು ಮೊಬೈಲ್, ಮಾಜಿ ಪ್ರಧಾನಿ ಡಾ.ಮನಮೋಹನಸಿಂಗ್ ಅವರ ಆರ್ಥಿಕತೆ ದೇಶ ಅಭಿವೃದ್ಧಿಶೀಲ, ಪ್ರಗತಿಶೀಲ, ಕುವೆಂಪು ಅವರ ಆಶಯದಂತೆ ರಾಷ್ಟ್ರವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಮಾಡಿವೆ ಎಂದರು.
ಕೆಲ ಶಕ್ತಿಗಳು ಭಾರತವನ್ನು ಧರ್ಮದ ಹೆಸರಿನಲ್ಲಿ, ಜಾತಿ ಹೆಸರಿನಲ್ಲಿ ಒಡೆಯುವ ಪ್ರಯತ್ನ ಮಾಡುತ್ತಿದ್ದು, ದೇಶದ ರಕ್ಷಣೆ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದರಲ್ಲದೆ, ಈ ಬಾರಿ ಜಿಲ್ಲೆಯ ಎಂಟೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಲು ಪಕ್ಷ ಶ್ರಮಿಸುತ್ತಿದೆ ಎಂದರು.
ಇದೇ ವೇಳೆ 94 ವರ್ಷದ ಹಿರಿಯ ಕಾಂಗ್ರೆಸ್ಸಿಗ ಕಪನಿಂಬರಗಿಯ ತುಕಾರಾಮ ಠೋಕೆ ಪಾದಯಾತ್ರೆಯಲ್ಲಿ ಭಾಗವಹಿಸಿ ಅಂದಾಜು ಎಂಟು ಕಿ.ಮೀ.ದೂರ ನಡೆದದ್ದನ್ನು ಪ್ರಶಂಸಿಸಿದರು.
ವಿಜಯಪುರ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾರಾಣಿ ತುಂಗಳ ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತರೆಲ್ಲರೂ ಒಗ್ಗೂಡಿ ಕಾರ್ಯ ಮಾಡಬೇಕಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಮಾತ್ರ ದೇಶ, ರಾಜ್ಯ ಶಾಂತವಾಗಿರಲು ಸಾಧ್ಯ ಎಂದರು.
ವಿಜಯಪುರ-ಬಾಗಲಕೋಟೆ ಹಾಲು ಒಕ್ಕೂಟದ ಅಧ್ಯಕ್ಷ ಸಂಬಾಜಿರಾವ ಮಿಸಾಳೆ, ಎಪಿಎಂಸಿ ಮಾಜಿ ಅಧ್ಯಕ್ಷ ಜಟ್ಟೆಪ್ಪ ರವಳಿ, ಹೋರ್ತಿ ಜಿಪಂ ಮಾಜಿ ಸದಸ್ಯ ಗುರನಗೌಡ ಪಾಟೀಲ, ತಾಪಂ ಮಾಜಿ ಅಧ್ಯಕ್ಷ ಅಣ್ಣಪ್ಪ ಬಿದರಕೋಟಿ, ಇಂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಲಿಯಾಸ ಬೋರಾಮಣಿ, ಪುಂಡಲೀಕ ಹೂಗಾರ, ಬಿ.ಎಂ.ಕೋರೆ, ಶಂಕರ ನಾಯಕ, ಹಣಮಂತ ಖಂಡೇಕರ, ರಶೀದ ಅರಬ, ತಾಪಂ ಮಾಜಿ ಅಧ್ಯಕ್ಷ ರುಕುಮುದ್ದೀನ್ ತದ್ದೇವಾಡಿ, ಪುರಸಭೆ ಮಾಜಿ ಅಧ್ಯಕ್ಷ ಶ್ರೀಕಾಂತ ಕುಡಿಗನೂರ, ಮಹಾದೇವ ಪೂಜಾರಿ ಇತರರಿದ್ದರು.
ಸ್ವಾತಂತ್ರೃ ಸಿಕ್ಕಾಗಿನಿಂದ ಇಲ್ಲಿವರೆಗೆ ಈ ಮತಕ್ಷೇತ್ರ ಸಚಿವ ವಂಚಿತ ಮತಕ್ಷೇತ್ರವಾಗಿದೆ. ಆ ಹಣೆಪಟ್ಟಿ ಅಳಿಸಲು ನೀವೆಲ್ಲ ಒಗ್ಗೂಡಿ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಹೆಗಲು ನೀಡಬೇಕಿದೆ. ಈ ಭಾಗದ ಜನ ಆಶೀರ್ವಾದದಿಂದ ಸಚಿವನಾಗಿ ಆಯ್ಕೆಯಾದರೆ, ತಾಲೂಕನ್ನು ಜಿಲ್ಲೆ ಮಾಡಿ ಸಂಪೂರ್ಣ ಅಭಿವೃದ್ಧಿಪಡಿಸಲು ಶ್ರಮಿಸುವೆ.
ಯಶವಂತರಾಯಗೌಡ ಪಾಟೀಲ ಶಾಸಕ