ಲಾಕ್‌ಡೌನ್ ಮಧ್ಯೆಯೇ ಕ್ರಷರ್ ಸದ್ದು

VJP 16-1
Published on

ಪರಶುರಾಮ ಭಾಸಗಿ ವಿಜಯಪುರ

ಕರೊನಾದಿಂದಾಗಿ ಇಡೀ ದೇಶ ಲಾಕ್‌ಡೌನ್ ಆಗಿದ್ದು, ಭೀಮಾ ತೀರ ಮಾತ್ರ ತಮಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ಅಕ್ರಮ ದಂಧೆಯತ್ತ ಮಗ್ಗಲು ಹೊರಳಿಸಿದೆ !
ಹೌದು, ಆಡಳಿತ ಯಂತ್ರ ಕರೊನಾ ನಿಯಂತ್ರಣದತ್ತ ಚಿತ್ತ ನೆಟ್ಟಿರುವಾಗಲೇ ಸಾಧ್ಯವಾದಷ್ಟು ಅಕ್ರಮ ನಡೆಸಲು ಕೆಲವು ದಂಧೆಕೋರರು ಪೈಪೋಟಿಗೆ ಇಳಿದಿದ್ದಾರೆ. ಭೀಮಾ ತೀರದಲ್ಲಿ ಒಂದೆಡೆ ಅಕ್ರಮ ಮರಳು ದಂಧೆ ಅವ್ಯಾಹತವಾಗಿದ್ದರೆ ಇನ್ನೊಂದೆಡೆ ರಾತ್ರಿಯಿಡೀ ಸದ್ದು ಮಾಡುತ್ತಿರುವ ಸ್ಟೋನ್ ಕ್ರಷರ್‌ಗಳು ಗ್ರಾಮೀಣರ ನಿದ್ದೆಗೆಡಿಸುತ್ತಿವೆ.

ರಾತ್ರಿ ಯಂತ್ರಗಳ ಸದ್ದು

ಇಂಡಿ ತಾಲೂಕಿನ ಹಡಲಸಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೊನಕನಹಳ್ಳಿ ಗ್ರಾಮದ ವಿಜಯನಗರ ಎಲ್‌ಟಿ 2ರ ವ್ಯಾಪ್ತಿಯಲ್ಲಿ 3 ಸ್ಟೋನ್ ಕ್ರಷರ್‌ಗಳು ಲಾಕ್‌ಡೌನ್ ಮಧ್ಯೆಯೂ ಕಾರ್ಯಾರಂಭಗೊಂಡಿವೆ. ಈ ಬಗ್ಗೆ ಗ್ರಾಮಸ್ಥರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೂ ಹರಿಬಿಟ್ಟಿದ್ದಾರೆ. ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲವೆನ್ನುತ್ತಾರೆ ಗ್ರಾಪಂ ಸದಸ್ಯ ರೇವಣಸಿದ್ದ ಗೋಡಕೆ.
ರಾತ್ರಿಯಾಗುತ್ತಿದ್ದಂತೆ ಜೆಸಿಬಿ ಹಾಗೂ ಟಿಪ್ಪರ್‌ಗಳ ಮೂಲಕ ಕಡಿ ಸಾಗಾಟ ಮಾಡಲಾಗುತ್ತಿದೆ. ಜತೆಗೆ ಕ್ರಷರ್ ಹಗಲು ರಾತ್ರಿ ಕಾರ್ಯ ನಿರ್ವಹಿಸುತ್ತಿದೆ. ಕಾರ್ಮಿಕರು ಜೀವ ಲೆಕ್ಕಿಸದೆ ದುಡಿಯುತ್ತಿದ್ದಾರೆ. ಮಾಲೀಕರ ನಡೆಯಿಂದ ಗ್ರಾಮಸ್ಥರಿಗೂ ಆತಂಕ ಕಾಡುತ್ತಿದೆ ಎಂಬುದು ಗೋಡಕೆ ಅವರ ಆರೋಪ.

ಇಲಾಖೆ ನಿಯಮ ಸ್ಪಷ್ಟವಿಲ್ಲ

ಲಾಕ್‌ಡೌನ್ ಜಾರಿಯಲ್ಲಿರುವಾಗ ಸ್ಟೋನ್ ಕ್ರಷರ್ ಕಾರ್ಯಾರಂಭಿಸಬೇಕೇ ಬೇಡವೇ ಎಂಬುದರ ಬಗ್ಗೆ ಸ್ಪಷ್ಟ ನಿರ್ದೇಶನವಿಲ್ಲ ಎನ್ನುತ್ತಾರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಚಿದಂಬರ್. ಜಿಲ್ಲೆಯಲ್ಲಿ ಅಂದಾಜು 70 ಸ್ಟೋನ್ ಕ್ರಷರ್‌ಗಳಿವೆ. ಬಹುತೇಕ ಕ್ರಷರ್‌ಗಳು ಚಾಲ್ತಿಯಲ್ಲಿರುವುದು ಕಂಡು ಬಂದಿದೆ. ಮೊದಲ ಹಂತದ ಲಾಕ್‌ಡೌನ್ ಸಂದರ್ಭ ಸ್ಪಷ್ಟ ನಿರ್ದೇಶನವಿದ್ದುದರಿಂದ ಸ್ಥಗಿತಗೊಳಿಸಲಾಗಿತ್ತು. ಎರಡನೇ ಹಂತದಲ್ಲಿ ಸ್ಪಷ್ಟತೆ ಇಲ್ಲವೆಂಬುದು ಅಧಿಕಾರಿ ಹೇಳಿಕೆ. ಆದರೆ, ಸ್ಟೋನ್ ಕ್ರಷರ್‌ಗಳಲ್ಲಿ ಕೆಲಸ ನಿರ್ವಹಿಸುವ ಲಾರಿ ಚಾಲಕರು ಅನ್ಯ ಸ್ಥಳಗಳಿಗೆ ಹೋಗಿ ಬರುತ್ತಾರೆ. ಕೆಲವು ಕಾರ್ಮಿಕರು ಬೇರೆ ಜಿಲ್ಲೆ ಹಾಗೂ ರಾಜ್ಯದವರಿದ್ದಾರೆ. ಅವರಿಗೆ ಸೋಂಕು ತಗಲುವುದಿಲ್ಲವೆಂಬ ಖಚಿತತೆ ಏನು? ಎಂಬುದು ಗ್ರಾಮಸ್ಥರ ಪ್ರಶ್ನೆ.

ಲಾಕ್‌ಡೌನ್ ಮಧ್ಯೆ ನಿಯಮ ಉಲ್ಲಂಘಿಸಿ ಸ್ಟೋನ್ ಕ್ರಷರ್ ನಡೆಸುತ್ತಿರುವ ಮಾಲೀಕರ ಪರವಾನಗಿ ರದ್ದು ಮಾಡಬೇಕು. ಸ್ಟೋನ್ ಕ್ರಷರ್ ಬಂದ್ ಮಾಡಲು ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಜಿಲ್ಲಾಡಳಿತ ಕೂಡಲೇ ಗಮನ ಹರಿಸಬೇಕು. ಇಲ್ಲವಾದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ.
ರೇವಣಸಿದ್ದ ಆರ್. ಗೋಡಕೆ, ಗ್ರಾಪಂ ಸದಸ್ಯ ಸೊನಕನಹಳ್ಳಿ

ಸ್ಟೋನ್ ಕ್ರಷರ್ ಸ್ಥಗಿತಗೊಳಿಸಬೇಕೇ? ಬೇಡವೇ? ಎಂಬ ಸ್ಪಷ್ಟ ನಿರ್ದೇಶನವಿಲ್ಲ. ಲಾಕ್‌ಡೌನ್‌ನಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾಲೀಕರು ಅರ್ಥ ಮಾಡಿಕೊಳ್ಳಬೇಕು. ಸ್ಥಗಿತಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು.
ಚಿದಂಬರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net