

ಇಂಡಿ: ಪಟ್ಟಣದ ಸರ್ಕಾರಿ ನೌಕರರ ಸಂಘದ ಭವನದಲ್ಲಿ ಶುಕ್ರವಾರ ಜರುಗಿದ ರಾಜ್ಯ ಘಟಕದ ಅಧ್ಯಕ್ಷ ಷಡಕ್ಷರಿ ಅವರ ಅಭಿನಂದನಾ ಸಮಾರಂಭದಲ್ಲಿ ತಾಲೂಕಿನ ಜಿಪಿಟಿ ಶಿಕ್ಷಕರ ಸಂಘದ ವತಿಯಿಂದ ವಿವಿಧ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಲಾಯಿತು.
ತಾಲೂಕು ಜಿಪಿಟಿ ಸಂಘದ ಅಧ್ಯಕ್ಷ ಶಂಕರ ಕೋಳೆಕರ ಅವರು ಮಾತನಾಡಿ, ಜಿಪಿಟಿ ಶಿಕ್ಷಕರನ್ನು ಪ್ರೌಢಶಾಲೆಗೆ ಹಾಗೂ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರನ್ನಾಗಿ ಬಡ್ತಿ ನೀಡುವುದು. ಸಿಆರ್‌ಪಿ, ಬಿಆರ್‌ಪಿ, ಇಸಿಒ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 10 ವರ್ಷಗಳ ಬದಲಾಗಿ, ಈ ಮೊದಲಿನಂತೆ 5 ವರ್ಷ ಮಾಡುವುದು. ವರ್ಗಾವಣೆಯಲ್ಲಿ ಜಿಪಿಟಿ ಇಂಗ್ಲಿಷ್ ಶಿಕ್ಷಕರಿಗೆ ಖಾಲಿ ಹುದ್ದೆಗಳ ತೀವ್ರ ಕೊರತೆಗೆ ಕಾರಣವಾಗಿರುವ ಅವೈಜ್ಞಾನಿಕ ಪಿಟಿಆರ್ ಬದಲಾವಣೆ ಮಾಡಿ ಈ ಹಿಂದೆ ಇದ್ದಂತೆ ಇಂಗ್ಲಿಷ್ ಭಾಷೆಯನ್ನು 2ನೇ ಆದ್ಯತೆಯನ್ನಾಗಿ ಪರಿಗಣಿಸುವುದು. ರಾಜ್ಯ ಸರ್ಕಾರಿ ನೌಕರರ ಸಂಘದ ಬೈಲಾ ತಿದ್ದುಪಡಿ ಮಾಡಿ ಜಿಪಿಟಿ ಶಿಕ್ಷಕರ ವೃಂದಕ್ಕೆ ಪ್ರತ್ಯೇಕ ಚುನಾಯಿತ ಸ್ಥಾನ ಹಾಗೂ ನಾಮ ನಿರ್ದೇಶಿತ ಹುದ್ದೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಹಕಾರಿ, ಪ್ರಧಾನ ಕಾರ್ಯದರ್ಶಿ ಹನುಮಂತರಾಯ ಪೂಜಾರಿ, ಖಜಾಂಚಿ ಶಶಿ ವಡ್ಡರ, ಮಹಾದೇವ ಗಬಸಾವಳಗಿ ಇತರರಿದ್ದರು.