ಮತದಾರರ ಪಟ್ಟಿ ಪರಿಷ್ಕರಣೆ ಆರಂಭ

Indi-2-2
ಇಂಡಿ ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ತಯಾರಿ ಕುರಿತು ನಡೆದ ಸಭೆಯಲ್ಲಿ ರಾಮಚಂದ್ರ ಗಡದೆ ಮಾತನಾಡಿದರು. ತಹಸೀಲ್ದಾರ್ ನಾಗಯ್ಯ ಹಿರೇಮಠ, ಆರ್.ಬಿ.ಗುನ್ನಾಪುರ ಇತರರಿದ್ದರು.
Published on

ಇಂಡಿ: ಚುನಾವಣೆ ಆಯೋಗ ವಿಧಾನಸಭೆ, ಲೋಕಸಭೆ ಮತ್ತು ಕ್ಷೇತ್ರದ ಮತದಾರರ ಪಟ್ಟಿ ತಯಾರಿಕೆ ಮತ್ತು ಪರಿಷ್ಕರಣೆಯಲ್ಲಿ ಅಗತ್ಯ ಬದಲಾವಣೆಗಳನ್ನು ತರಲು ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಕಂದಾಯ ಉಪವಿಭಾಗಾಧಿಕಾರಿ ರಾಮಚಂದ್ರ ಗಡದೆ ಹೇಳಿದರು.ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ತಯಾರಿ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಮತದಾರರ ಪಟ್ಟಿಯ ಭಾಗವಾಗಲು ಯುವ ಸಮುದಾಯಕ್ಕೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲಾಗಿದೆ. ಅರ್ಹತಾ ದಿನಾಂಕವಾದ ಜನವರಿ 1ರವರೆಗೂ ಕಾಯಬೇಕಾಗಿಲ್ಲ. 17ವರ್ಷ ಮೇಲ್ಪಟ್ಟ ಯುವಕರಿಗೆ ಮುಂಗಡ ಅರ್ಜಿ ಸಲ್ಲಿಸುವ ಸೌಲಭ್ಯವಿದೆ. ಆ.1ರಿಂದ ಮತದಾರರ ನೋಂದಣಿಗಾಗಿ ಹೊಸ ಸರಳೀಕರಣದ ಅರ್ಜಿ ನಮೂನೆಗಳು, ಮತದಾರರ ಪಟ್ಟಿಯ ಹೆಸರು, ಇನ್ನಿತರ ತಿದ್ದುಪಡಿಗಳಿಗೆ ಹೊಸ ನಮೂನೆ 8 ನೀಡಲಾಗುತ್ತಿದೆ ಎಂದರು.

ಮತದಾರರ ಪಟ್ಟಿಗೆ ಸ್ವಯಂ ಪ್ರೇರಿತ ಆಧಾರ ಜೋಡಣೆ ಸೌಲಭ್ಯ, ಒಂದೇ ತರಹದ ಹೆಸರು, ಫೋಟೊ ನಮೂದುಗಳನ್ನು ಹೊಂದಿರುವ ಮತದಾರರ ಪರಿಶೀಲನೆ ಆದ್ಯತೆ, ಮತದಾರರ ಪಟ್ಟಿ ಪೂರ್ವ ಪರಿಷ್ಕರಣೆ ಆಗಸ್ಟ್ ತಿಂಗಳಲ್ಲಿ ಆರಂಭವಾಗಲಿದೆ. ಆನ್‌ಲೈನ್ ವ್ಯವಸ್ಥೆಯಡಿ ಎನ್‌ವಿಎಸ್ಪಿ ಮತ್ತು ವೋಟರ್ ಹೆಲ್ಪ್‌ಲೈನ್ ಆಪ್‌ನಲ್ಲಿ ಮತದಾರರು ಮಾಹಿತಿ ದೃಢೀಕರಿಸಲು ಅವಕಾಶ ನೀಡಲಾಗಿದೆ ಎಂದರು.

ಒಟಿಪಿ ಸಹಿತ ದೃಢೀಕರಣ ಸಾಧ್ಯವಾಗದಿದ್ದಲ್ಲಿ ಮತದಾರರು ಆಧಾರ ಅನ್ನು ಮೇಲಿನ ಆ್ಯಪ್‌ಗಳಲ್ಲಿ ಅಪ್‌ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು. ಮಾಹಿತಿ ಅಪ್‌ಲೋಡ್ ಮಾಡುವುದು ಸಾಧ್ಯವಾಗದಿದ್ದಲ್ಲಿ, ಸಂಬಂಧಿಸಿದ ಬೂತ್ ಲೆವೆಲ್ ಅಧಿಕಾರಿಗಳಿಗೆ ನಮೂನೆ -6ಬಿಯಲ್ಲಿ ಹಾರ್ಡ್ ಪ್ರತಿಯಲ್ಲಿ ಅರ್ಜಿ ಸಲ್ಲಿಸಬಹುದು.

ಸದರಿ ಅರ್ಜಿಯನ್ನು ಮತದಾರರ ಅನುಕೂಲ ಕೇಂದ್ರಗಳು ಇ-ಸೇವಾ ಕೇಂದ್ರಗಳು ನಾಗರಿಕ ಸೇವಾ ಕೇಂದ್ರಗಳು ಹಾಗೂ ಮತದಾರರ ನೋಂದಣಿ ಅಧಿಕಾರಿ ಸಹಾಯಕ ಮತದಾರರ ನೋಂದಣಿ ಅಧಿಕಾರಿ ಕಚೇರಿಯಲ್ಲಿ ಸಲ್ಲಿಸಬಹುದು ಎಂದು ಗಡದೆ ಹೇಳಿದರು.

ತಹಸೀಲ್ದಾರ್ ನಾಗಯ್ಯ ಹಿರೇಮಠ, ಚುನಾವಣೆ ವಿಷಯ ನಿರ್ವಾಹಕ ಆರ್.ಬಿ.ಗುನ್ನಾಪುರ, ಚುನಾವಣೆ ಶಿರಸ್ತೇದಾರ ಆರ್.ಬಿ.ಮೂಗಿ, ಸಂಘ ಸಂಸ್ಥೆಗಳ, ರಾಜಕೀಯ ಮುಖಂಡರು, ಎನ್‌ಜಿಒ ಸಂಸ್ಥೆಯವರು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net