

ಇಂಡಿ: 12ನೇ ಶತಮಾನದಲ್ಲೇ ಸಂಸತ್ತು ರಚಿಸಿ ಶೋಷಿತರು ಹಾಗೂ ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ಬಸವಣ್ಣನವರು ಮಾಡಿದ್ದಾರೆ ಎಂದು ವಿಜಯಪುರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ ಹೇಳಿದರು.
ತಾಲೂಕಿನ ಅಥರ್ಗಾ ಗ್ರಾಮದ ಅಕ್ಕಮಹಾದೇವಿ ಮಠದಲ್ಲಿ ಮೈಸೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಜಿಲ್ಲಾ ಘಟಕ, ಇಂಡಿ ತಾಲೂಕು ಘಟಕದ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಪ್ರಥಮ ಮಹಿಳಾ ಸಮಾವೇಶದಲ್ಲಿ ಅವರು ಮಾತನಾಡಿದರು.
ಬಸವಣ್ಣನವರು ಸಂಸತ್ತನ್ನು ರಚಿಸಿ ಆಧ್ಯಾತ್ಮಿಕ ಚಿಂತನೆಗೆ ಅವಕಾಶ ಮಾಡಿಕೊಟ್ಟರು. 1948ರಲ್ಲಿ 30 ಅಂಶಗಳ ಕಾರ್ಯಕ್ರಮವನ್ನು ಸಂಸತ್ತಿನಲ್ಲಿ ಯುಎನ್‌ಒ ಘೋಷಿಸಿತು. ಆದರೆ, ಬಸವಣ್ಣನವರು 12ನೇ ಶತಮಾನದಲ್ಲಿ ರಚಿಸಿದ ಸಂಸತ್ತಿನಲ್ಲಿ 100 ಅಂಶಗಳ ಕಾರ್ಯಕ್ರಮವನ್ನು ಆಗಲೇ ಹೇಳಿದ್ದರು. ಮಹಿಳೆಯರಿಗೆ ಮೊಟ್ಟಮೊದಲಿಗೆ ಸ್ವಾತಂತ್ರೃವನ್ನು ಕೊಟ್ಟವರು ಬಸವಾದಿ ಶರಣರು ಎಂದರು. ಡಾ. ಸ್ವರೂಪಾನಂದ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, 115 ವರ್ಷದ ಶತಾಯುಷಿ ಗುರುಲಿಂಗಮ್ಮ ಅಜ್ಜಿಯವರು ಅಥರ್ಗಾದಲ್ಲಿ ಅಕ್ಕಮಹಾದೇವಿ ಹೆಸರಿನಲ್ಲಿ ಮಠ ಸ್ಥಾಪಿಸಿರುವ ಕಾರ್ಯ ಶ್ಲಾಘನೀಯವಾಗಿದೆ. ಅಲ್ಲದೆ, ಶೈಕ್ಷಣಿಕ ಕ್ಷೇತ್ರದಲ್ಲಿ ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿ ಶಿಕ್ಷಣವಂತರಾಗಲು ಸಹಕಾರ ನೀಡಿದ ಶಿರಸಂಗಿ ಲಿಂಗರಾಜ ಸ್ವಾಮೀಜಿಗಳನ್ನು ಸ್ಮರಿಸಿದರು. ಇಂಡಿ ನಗರದಲ್ಲಿ ಸಿದ್ಧಾರೂಢ ಮಠ ಸ್ಥಾಪಿಸಿದ್ದು, ಇದು ದಿನದ 24 ಗಂಟೆಯೂ ಶರಣ ಸಾಹಿತ್ಯಕ್ಕೆ ತೆರೆದ ಬಾಗಿಲಿನಂತೆ ಕಾರ್ಯನಿರ್ವಹಿಸಲಿದೆ ಎಂದರು. ಕದಳಿ ವೇದಿಕೆ ತಾಲೂಕು ಅಧ್ಯಕ್ಷೆ ಗಂಗೂಬಾಯಿ ಗಲಗಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭವಾನಿ ಗುಳೇದಗುಡ್ಡ ಆಶಯ ನುಡಿ ಹೇಳಿದರು.
ಮೊದಲ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ಉಷಾದೇವಿ ಹಿರೇಮಠ ವಹಿಸಿದ್ದರು. ರೇಖಾ ಪಾಟೀಲ, ಪ್ರಾಚಾರ್ಯೆ ಶೈಲಜಾ ತೆಲ್ಲೂರ ಉಪನ್ಯಾಸ ನೀಡಿದರು. ಎರಡನೇ ಗೋಷ್ಠಿ ಹಿರಿಯ ಸಾಹಿತಿ ದಾನಪ್ಪ ಬಗಲಿ ಅಧ್ಯಕ್ಷತೆಯಲ್ಲಿ ನಡೆಯಿತು. ಕಾಂತು ಇಂಡಿ, ಮ.ಗು. ಯಾದವಾಡ, ಸಿದ್ಧಲಿಂಗಪ್ಪ ಹದಿಮೂರ ಇದ್ದರು. ಶ್ರದ್ಧಾ ಪವಾರ ಹಾಗೂ ಸಂಗಡಿಗರು ವಚನಗಾಯನ ಹೇಳಿದರು.
ಸರ್ವಾಧ್ಯಕ್ಷೆ ಮಾತಾ ವಚನಶ್ರೀ ತಾಯಿ, ತಾಲೂಕು ಕದಳಿ ವೇದಿಕೆ ಗೌರವಾಧ್ಯಕ್ಷೆ ವಿಜಯಲಕ್ಷ್ಮೀ ದೇಸಾಯಿ, ತಾಲೂಕು ಕದಳಿ ವೇದಿಕೆ ಅಧ್ಯಕ್ಷೆ ಗಂಗಾಬಾಯಿ ಗಲಗಲಿ, ಶತಾಯುಷಿ ಗುರುಲಿಂಗವ್ವ ಬಾಳಿ, ದತ್ತಿದಾನಿ ಶ್ರೀಶೈಲ ಹಂಜಗಿ, ಕಾಸೀಬಾಯಿ ಹಂಜಗಿ, ಸುನೀತಾ ದಯಾಸಾಗರ ಪಾಟೀಲ, ರಾಜಯೋಗಿನಿ ಯಮುನಾಜಿ ಅಕ್ಕನವರು, ವಿ.ಸಿ. ನಾಗಠಾಣ, ಕಮಲಾಕ್ಷಿ ಗೆಜ್ಜಿ, ಮಾಲಾ ಚವಾಣ್, ನಂದಾ ನವಲಗುಂದ, ರಾಜಶೇಖರ ಉಮರಾಣಿ, ವಿ.ಸಿ. ನಾಗಠಾಣ, ಸುಲೋಚನಾ ಪತಂಗಿ, ದ್ರಾಕ್ಷಾಯಣಿ ಬಿರಾದಾರ, ಸವಿತಾ ಕನಕರೆಡ್ಡಿ, ಇಂದುಮತಿ ಲಮಾಣಿ, ನಿಂಗವ್ವ ಬೋಳೇಗಾಂವ ಮತ್ತಿತರರಿದ್ದರು.
ನಿರ್ಮಲಾ ತೇಲಿ ಸ್ವಾಗತಿಸಿದರು. ಪಾರ್ವತಿ ಸೊನ್ನದ ನಿರೂಪಿಸಿದರು. ಶಾರದಾ ಗಿರಣಿ ವಂದಿಸಿದರು.