

ಇಂಡಿ: ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಎದುರಾಗಿದ್ದು, ಸಿಬ್ಬಂದಿಯಿಲ್ಲದೆ ಕಚೇರಿ ಬಿಕೋ ಎನ್ನುತ್ತಿದೆ.
ಕೃಷಿ ಇಲಾಖೆಯಲ್ಲಿ ಒಟ್ಟು 50 ಮಂಜೂರಾದ ಹುದ್ದೆಗಳಿದ್ದು, ಅದರಲ್ಲಿ ಕೇವಲ 15 ಹುದ್ದೆಗಳಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನುಳಿದ 35 ಹುದ್ದೆಗಳು ಖಾಲಿಯಿವೆ.
ಕೃಷಿ ಅಧಿಕಾರಿ ಎಂಟು ಹುದ್ದೆಗಳು ಮಂಜೂರಾಗಿದ್ದು ಅದರಲ್ಲಿ ಆರು ಹುದ್ದೆಗಳಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದೆ. ಎರಡು ಹುದ್ದೆಗಳು ಖಾಲಿಯಿವೆ. ಸಹಾಯಕ ಕೃಷಿ ಅಧಿಕಾರಿ 29 ಹುದ್ದೆಗಳಿದ್ದು ಅದರಲ್ಲಿ ಕೇವಲ ಒಬ್ಬ ಅಧಿಕಾರಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. 28 ಹುದ್ದೆಗಳು ಖಾಲಿಯಿವೆ. ಕೃಷಿ ಸಹಾಯಕ ಒಂದು ಹುದ್ದೆಯಿದ್ದು ಆ ಒಂದು ಹುದ್ದೆ ಸಹ ಖಾಲಿ ಇದೆ. ರೇಖಾಗಾರ ಒಂದು ಹುದ್ದೆ ಇದ್ದು ಆ ಒಂದು ಹುದ್ದೆ ಕೂಡ ಖಾಲಿ ಇದೆ. ಗ್ರೂಪ್ ಡಿ ನಾಲ್ಕು ಹುದ್ದೆಗಳಿದ್ದು ಎರಡು ಹುದ್ದೆ ಖಾಲಿ ಇವೆ.
ಒಟ್ಟಾರೆ 50 ಹುದ್ದೆಗಳಲ್ಲಿ 35ಹುದ್ದೆಗಳು ಖಾಲಿಯಿದ್ದು, ಕೇವಲ 15 ಹುದ್ದೆಗಳಲ್ಲಿ ಮಾತ್ರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಸಮಯಕ್ಕೆ ಸರಿಯಾಗಿ ರೈತರ ಕೆಲಸಗಳು ಆಗುತ್ತಿಲ್ಲ ಎಂಬುದು ರೈತರ ಆರೋಪವಾಗಿದೆ. ಕೂಡಲೆ ಸರ್ಕಾರ ಸಿಬ್ಬಂದಿ ನಿಯೋಜನೆ ಮಾಡಿ, ರೈತರಿಗೆ ವಿತರಿಸಬೇಕಾದ ಸಾಮಗ್ರಿ ಸೇರಿ ನೀಡಬೇಕಾದ ಸೌಲಭ್ಯ ಒದಗಿಸಿಕೊಡಬೇಕೆಂದು ರೈತ ಮುಖಂಡರು ಆಗ್ರಹಿಸಿದ್ದಾರೆ.
ಸರ್ಕಾರಗಳು ಕೇವಲ ರೈತಪರ ಇದ್ದೇವೆ ಎಂದು ಹೇಳುವುದಕ್ಕಿಂತ ರೈತರಿಗೆ ಉಪಯೋಗವಾಗುವ ಕೃಷಿ ಹಾಗೂ ತೋಟಗಾರಿಕೆ ಸೇರಿದಂತೆ ಇನ್ನಿತರ ಇಲಾಖೆಗಳಲ್ಲಿ ಸಿಬ್ಬಂದಿ ನೇಮಕಾತಿಯ ಜತೆಗೆ ವಿನೂತನ ಯೋಜನೆಗಳನ್ನು ಜಾರಿಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡುವ ಕಾರ್ಯ ಮಾಡಬೇಕು.
ಭೀಮರಾಯಗೌಡ ಬಿರಾದಾರ, ಕೃಷಿಕ ಹಿರೇಬೇವನೂರ ಗ್ರಾಮ
ನಮ್ಮಲ್ಲಿ ಸಿಬ್ಬಂದಿ ಕೊರತೆ ಇರುವುದು ನಿಜ. ಆದರೂ ಸರ್ಕಾರಿ ಸಮಯವನ್ನು ಮೀರಿ ಸಹ ರಾತ್ರಿ ಹತ್ತು ಗಂಟೆಯವರೆಗೆ ರೈತರ ಕಾರ್ಯ ಮಾಡುತ್ತಿದ್ದೇವೆ. ಮೇಲಧಿಕಾರಿಗಳಿಗೆ ತಿಳಿಸಿ ಹುದ್ದೆ ಭರ್ತಿ ಮಾಡಿಕೊಳ್ಳಲು ವಿನಂತಿಸಿಕೊಳ್ಳುತ್ತೇವೆ. ಮಹದೇವಪ್ಪ ಏವೂರ, ಸಹಾಯಕ ಕೃಷಿ ನಿರ್ದೇಶಕ ಇಂಡಿ.