

ಮಂಗಳೂರು: ವಳಚ್ಚಿಲ್ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.
ಆದಾಯತೆರಿಗೆ ಡೆಪ್ಯುಟಿ ಕಮಿಷನರ್ ರಮಿತ್ ಚೆನ್ನಿತ್ತಲ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ವಿದ್ಯಾರ್ಥಿಗಳು ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ಮರೆಯಬಾರದು. ಕಲಿಕೆಗಿಂತ ಕಲಿತ ಪಾಠವನ್ನು ಜೀವನದಲ್ಲಿ ಅಳವಡಿಸಬೇಕು ಎಂದರು.
ಎಕ್ಸ್‌ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಪ್ರೊ.ನರೇಂದ್ರ ಎಲ್.ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾತಂತ್ರ್ಯ ಶುಭದಿನದಂದು ನಾವು ಏನು ಆಗಬೇಕು ಹಾಗೂ ದೇಶದ ಭವಿಷ್ಯಕ್ಕೆ ಯಾವ ಕೊಡುಗೆ ನೀಡಬೇಕು ಎಂಬ ಬಗ್ಗೆ ಚಿಂತನೆ ನಡೆಸಬೇಕು ಎಂದರು.
ಎಕ್ಸ್‌ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಯ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್. ನಾಯಕ್ ಅವರು ವಿದ್ಯಾರ್ಥಿ ಸಂಘದ ಪ್ರಸಕ್ತ ಶೈಕ್ಷಣಿಕ ಸಾಲಿನ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞೆ ಬೋಧಿಸಿ ಮಾತನಾಡಿ, ಉತ್ತಮ ನಾಯಕರು ಯಾವತ್ತೂ ಸಾಧನೆಯ ಬಗ್ಗೆ ಚಿಂತಿಸುತ್ತಾರೆ. ಪ್ರತಿಯೊಬ್ಬರೂ ನಾಯಕತ್ವದ ಗುಣವನ್ನು ಬದುಕಿನಲ್ಲಿ ಅಳವಡಿಸಿ ದೇಶದ ಭವಿಷ್ಯಕ್ಕೆ ಕೊಡುಗೆ ನೀಡಬೇಕು ಎಂದರು.
ಹಳೆವಿದ್ಯಾರ್ಥಿನಿ ಆಶಾ ಕಾಮತ್, ವಿ. ನರಹರಿ, ಉಪಪ್ರಾಂಶುಪಾಲರಾದ ರಾಘವೇಂದ್ರ ಶೆಣೈ ಮತ್ತು ಸುಬ್ರಹ್ಮಣ್ಯ ಉಡುಪ, ಕಾರ್ಯಕ್ರಮ ನಿರ್ದೇಶಕಿ ಜಾಸ್ಮಿನ್ ಪ್ರತಿಭಾ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಪ್ರಾಂಶುಪಾಲ ಡಾ. ಎನ್.ಕೆ.ವಿಜಯನ್ ಕರಿಪ್ಪಾಲ್ ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಭಿನಂದ್ ಬಿಜು ವಂದಿಸಿದರು. ವಿದ್ಯಾರ್ಥಿಗಳಾದ ಗೋಕುಲ್ ಜಿ.ಎಸ್. ಪಾವನಿ ಆರ್. ವರ್ಮಾ, ಆರ್ಯಾ ಕರಿಯನ್ನನವರ್ ಕಾರ್ಯಕ್ರಮ ನಿರೂಪಿಸಿದರು.