

ಮಂಡ್ಯ: ಜಿಲ್ಲಾಡಳಿತದ ವತಿಯಿಂದ ಆ.15ರಂದು ನಗರದ ಡಿಎಆರ್ ಮೈದಾನದಲ್ಲಿ ವ್ಯವಸ್ಥಿತ ಹಾಗೂ ಯಶಸ್ವಿಯಾಗಿ ಸ್ವಾತಂತ್ರ್ಯ ದಿನವನ್ನು ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂದು ಬೆಳಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ಮಾಡಿ ರಾಷ್ಟ್ರಗೀತೆ, ನಾಡಗೀತೆ ಹಾಗೂ ರೈತಗೀತೆ ನಂತರ ಧ್ವಜವಂದನೆ ಸ್ವೀಕರಿಸಲಿದ್ದಾರೆ. ಧ್ವಜಾರೋಹಣ ಸಮಯದಲ್ಲಿ ಯಾವುದೇ ಲೋಪದೋಷವಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ತಿಳಿಸಿದರು.
ಸ್ವಾತಂತ್ರ್ಯ ದಿನಾಚರಣೆ ಆಗಮಿಸುವ ಗಣ್ಯರಿಗೆ ಶಿಷ್ಟಾಚಾರದ ಪ್ರಕಾರ ಆಹ್ವಾನಿಸಿ ಹಾಗೂ ಸಾರ್ವಜನಿಕರಿಗೆ ಸೂಕ್ತ ಆಸನಗಳ ವ್ಯವಸ್ಥೆ ಮಾಡಬೇಕು. ಜತೆಗೆ ಧ್ವಜಾರೋಹಣ ಅಂಗಳವನ್ನು ತಳಿರು ತೋರಣ ಹಾಗೂ ಹೂ ಕುಂಡಗಳಿಂದ ಅಲಂಕರಿಸಬೇಕು. ಸರ್ಕಾರಿ ಕಟ್ಟಡ, ಸ್ಥಳೀಯ ಸಂಸ್ಥೆ ಹಾಗೂ ಶಾಲಾ ಕಾಲೇಜುಗಳನ್ನು ವಿದ್ಯುತ್ ದೀಪಾಲಂಕಾರಗಳಿಂದ ಆಕರ್ಷರ್ಣಿಯವಾಗಿ ಕಾಣುವಂತೆ ಸಿಂಗಾರಗೊಳಿಸಬೇಕು. ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವ ನೃತ್ಯರೂಪಕದ ಪ್ರತಿ ಕಾರ್ಯಕ್ರಮಕ್ಕೆ 5 ರಿಂದ 10 ನಿಮಿಷಗಳ ಕಾಲಮಿತಿಯಲ್ಲಿ ನಿಗದಿಪಡಿಸುವುದರ ಜತೆಗೆ ಆಗಮಿಸಿದ ಎಲ್ಲರಿಗೂ ಸಿಹಿ ವಿತರಿಸುವಂತೆ ಹೇಳಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎಂ.ಬಾಬು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪ ನಿರ್ದೇಶಕ ಕೃಷ್ಣಕುಮಾರ, ಅಬಕಾರಿ ಡಿಸಿ ಡಾ.ಮಹಾದೇವಿ ಬಾಯಿ, ಮುಡಾ ಆಯುಕ್ತೆ ಐಶ್ವರ್ಯಾ, ನಗರಸಭೆ ಆಯುಕ್ತ ಮಂಜುನಾಥ್ ಇತರರಿದ್ದರು.