

ಮಂಡ್ಯ: ಮೈಷುಗರ್ ಹೊಸ ಕಾರ್ಖಾನೆ ಸ್ಥಾಪನೆ ಮಾಡಲು ರಾಜ್ಯಸರ್ಕಾರ ಈಗಾಗಲೇ ಘೋಷಣೆ ಮಾಡಿದೆ. ಅದರಂತೆ ವಿಸ್ತೃತ ಯೋಜನಾ ವರದಿ ತಯಾರಿಸಲಾಗುತ್ತಿದೆ. ಅದರಂತೆ ಜಿಲ್ಲೆಯ ರೈತ ಮುಖಂಡರು ಹಾಗೂ ಕಬ್ಬು ಬೆಳೆಗಾರರ ಜತೆ ಸಮಾಲೋಚನೆ ನಡೆಸಿ ಹೊಸ ಕಾರ್ಖಾನೆ ನಿರ್ಮಾಣ ಅಥವಾ ಪುನಃಶ್ಚೇತನಗೊಳಿಸುವ ಸಂಬಂಧ ತೀರ್ಮಾನಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದ ಸರ್‌ಎಂ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಮಂಡ್ಯ ಕೃಷಿ ಪ್ರಧಾನ ಜಿಲ್ಲೆ. ಆದ್ದರಿಂದ ಕೃಷಿಗೆ ಪೂರಕವಾದ ಅನೇಕ ಚಟುವಟಿಕೆ ನಡೆಸಲು ಸೂಕ್ತವಾಗಿದೆ. ಕೃಷಿಯಲ್ಲಿ ಹೊಸ ವಿಧಾನಗಳ ಅಳವಡಿಕೆ, ವೈಜ್ಞಾನಿಕ ಉಪಕರಣಗಳ ಬಳಕೆ, ಕೃಷಿಯಲ್ಲಿ ತಂತ್ರಜ್ಞಾನದ ಬಳಕೆಯ ಸಾಧ್ಯತೆಗಳನ್ನು ಉತ್ತೇಜಿಸಲು, ಅನೇಕ ಹೊಸ ವಿಷಯಗಳ ಅಧ್ಯಯನವನ್ನು ಉತ್ತೇಜಿಸುವ ಸಲುವಾಗಿ ಜಿಲ್ಲೆಗೆ ಕೃಷಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಘೋಷಣೆ ಮಾಡಲಾಗಿದೆ ಎಂದರು.
ಕೆಆರ್‌ಎಸ್ ಅಣೆಕಟ್ಟೆಯ ಬೃಂದಾವನ ಉದ್ಯಾನವನ್ನು ವಿಶ್ವದರ್ಜೆಯ ಪ್ರವಾಸೋದ್ಯಮ ಆಕರ್ಷಣೆಯ ಕೇಂದ್ರವನ್ನಾಗಿ ಉನ್ನತೀಕರಿಸುವ ಸಲುವಾಗಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸುವ ಮೂಲಕ ಜನಪ್ರಿಯ ಪ್ರವಾಸಿ ತಾಣವನ್ನಾಗಿ ಮಾಡಿ, ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಉದ್ದೇಶಿಸಲಾಗಿದೆ. ವಿಶ್ವೇಶ್ವರಯ್ಯ ನಾಲೆಯು 92 ವರ್ಷ ಹಳೆಯದಾಗಿದ್ದು, ಶಿಥಿಲಾವಸ್ಥೆಯಲ್ಲಿರುವ ಕಾರಣ ಸಮಗ್ರ ಅಚ್ಚುಕಟ್ಟು ಪ್ರದೇಶಕ್ಕೆ ಶೀಘ್ರವಾಗಿ, ಸಮರ್ಪಕವಾಗಿ ನೀರನ್ನು ಹಂಚಿಕೆ ಮಾಡುವ ಉದ್ದೇಶದಿಂದ ವಿಶ್ವೇಶ್ವರಯ್ಯ ನಾಲೆ ಆಧುನೀಕರಣ ಕಾಮಗಾರಿಯನ್ನು ಕೈಗೆತ್ತುಕೊಂಡಿದ್ದು, ಸುಮಾರು 300 ಕೋಟಿ ರೂ ವೆಚ್ಚದ ಕಾಮಗಾರಿಯ ಪೈಕಿ ಶೇ.60 ರಷ್ಟು ಮುಕ್ತಾಯಗೊಂಡಿರುತ್ತದೆ. ಇದಲ್ಲದೆ ವಿಶ್ವೇಶ್ವರಯ್ಯ ನಾಲೆಯ ಅಚ್ಚುಕಟ್ಟಿನಲ್ಲಿ ಬರುವ ಸಂಪರ್ಕ ಶಾಖಾ ನಾಲಾ, ತುರಗನೂರು ಶಾಖಾ ನಾಲಾ, ಹೆಬ್ಬಕವಾಡಿ ಮತ್ತು ನಿಡಘಟ್ಟ ಶಾಖಾ ನಾಲಾಗಳನ್ನು ಆಧುನೀಕರಣ ಕಾರ್ಯವನ್ನು 400 ಕೋಟಿ ರೂ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ ಎಂದರು.
ಈ ವರ್ಷ ಉತ್ತಮ ಮಳೆಯಾಗಿದ್ದು, ನಮ್ಮೆಲ್ಲರ ಜೀವನಾಡಿ ಕೆಆರ್‌ಎಸ್ ಅಣೆಕಟ್ಟೆ ಭರ್ತಿಯಾಗಿರುವುದು ಜಿಲ್ಲೆಯ ರೈತರಲ್ಲಿ ಸಂತಸವನ್ನು ಮೂಡಿಸಿದೆ. ರೈತರ ಬೆಳೆಗಳಿಗೆ ಯಾವುದೇ ತೊಡಕಾಗದಂತೆ ನೀರು ಪೂರೈಸಲು ಕ್ರಮವಹಿಸಲಾಗುವುದು. ಇದಲ್ಲದೆ ಮಳವಳ್ಳಿ ತಾಲೂಕಿನ ಪೂರಿಗಾಲಿ ನೀರಾವರಿ ಯೋಜನೆಯನ್ನು 593 ಕೋಟಿ ರೂ ವೆಚ್ಚದಲ್ಲಿ 51 ಗ್ರಾಮದ 21 ಸಾವಿರ ಎಕರೆ ಪ್ರದೇಶಕ್ಕೆ ನೀರೊದಗಿಸುವ ಕಾಮಗಾರಿ ಮುಕ್ತಾಯಗೊಂಡಿದ್ದು, ಶೀಘ್ರದಲ್ಲಿ ಲೋಕಾರ್ಪಣೆ ಮಾಡಲಾಗುವುದು. ಒಂದೇ ಸೂರಿನಡಿ ಕೃಷಿ ಮತ್ತು ಕೃಷಿ ಸಂಬಂಧಿತ ಎಲ್ಲಾ ಯೋಜನೆಗಳು ರೈತರಿಗೆ ತಲುಪಬೇಕು ಎಂಬ ಸದುದ್ದೇಶದಿಂದ ಜಿಲ್ಲೆಯಲ್ಲಿ 8 ರೈತ ಸಂರ್ಪಕ ಕೇಂದ್ರಗಳನ್ನು ಮಂಜೂರು ಮಾಡಲಾಗಿದೆ ಎಂದರು.
ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ಬಾಕಿ ಇದ್ದ ಸುಮಾರು 11 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಕಳೆದ ಒಂದು ವರ್ಷದಲ್ಲಿ ಇತ್ಯರ್ಥಪಡಿಸಲಾಗಿದೆ. ಕೃಷಿ ಜಮೀನಿಗೆ ಸಂಬಂಧಿಸಿದಂತೆ ವ್ಯಾಜ್ಯಗಳನ್ನು ತಪ್ಪಿಸುವ ದೃಷ್ಠಿಯಿಂದ ಕಂದಾಯ ದಾಖಲೆಗಳಲ್ಲಿ ನಿಖರತೆಗಳನ್ನು ತರಲು ಎಲ್ಲ ಪಹಣಿಗಳಿಗೆ ಆಧಾರ್ ಜೋಡಣೆ ಮಾಡುವ ಕಾರ್ಯ ನಡೆಯುತ್ತಿದೆ. ವ್ಯವಸಾಯಕ್ಕೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಕೃಷಿಭಾಗ್ಯ ಯೋಜನೆಗೆ ಚಾಲನೆ ನೀಡಿದ್ದು, ಜಿಲ್ಲೆಗೆ 6 ಕೋಟಿ ರೂ ಅನುದಾನವನ್ನು ಮಂಜೂರು ಮಾಡಲಾಗಿರುತ್ತದೆ. ಅದರಂತೆ 462 ಕೃಷಿ ಹೊಂಡಗಳ ನಿರ್ಮಾಣದ ಗುರಿ ಹೊಂದಲಾಗಿರುತ್ತದೆ ಎಂದು ವಿವರಿಸಿದರು.
ಪ್ರವಾಹ ಮತ್ತು ಬರಗಾಲದಂತಹ ಹವಾಮಾನ ಸಂಬಅಧಿತ ಬೆಳೆನಷ್ಟಗಳಿಗೆ ಆರ್ಥಿಕ ರಕ್ಷಣೆ ಒದಗಿಸುವ ಉದ್ದೇಶದಿಂದ ಬೆಳೆ ವಿಮೆ ಯೋಜನೆ ಅನುಷ್ಠಾನಗೊಳಿಸುತ್ತಿದ್ದು, ಕಳೆದ ವರ್ಷ 2023ನೇ ಸಾಲಿನಲ್ಲಿ ವಿಮಾ ಯೋಜನೆಯಡಿ ಈವರೆಗೂ ರಾಜ್ಯದಲ್ಲಿ 1,911 ಕೋಟಿ ರೂ ಪರಿಹಾರ ಧನವನ್ನು ರೈತರಿಗೆ ವಿತರಿಸಲಾಗಿದೆ. ಅದರಂತೆ, ಜಿಲ್ಲೆಯಲ್ಲಿ ಒಟ್ಟು 85,960 ರೈತರು ನೋಂದಣಿ ಮಾಡಿಸಿಕೊಂಡಿದ್ದು, 38.92 ಕೋಟಿ ರೂ ಪರಿಹಾರ ವಿಮಾ ಮೊತ್ತವನ್ನು ಪಾವತಿಸಲಾಗಿದೆ ಎಂದರು.
ಕೃಷಿ ಇಲಾಖೆಯಲ್ಲಿ 979 ಖಾಲಿ ಹುದ್ದೆಗಳ ಭರ್ತಿಗೆ ಕೆಪಿಎಸ್‌ಸಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರೈತ ಕ್ಷೇತ್ರವನ್ನು ಸುಸ್ಥಿರ ಗೊಳಿಸಲು ವಿವಿಧ ರೈತಪರ ಯೋಜನೆಗಳನ್ನು ಒಗ್ಗೂಡಿಸಿ ಸಮಗ್ರ ಕೃಷಿ ಉತ್ತೇಜನಕ್ಕೆ ರೈತ ಸಮೃದ್ಧಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಕೃಷಿ ಮತ್ತು ಪೂರಕ ಚಟುವಟಿಕೆಗಳ ನೀತಿ ಯೋಜನೆಗಳ ಸಂಯೋಜನೆಗಾಗಿ ಇಲಾಖೆಗಳ ಸಮನ್ವಯ ಸಾಧಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೃಷಿ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿದೆ ಎಂದರು
ಶಾಸಕ ರವಿಕುಮಾರ್ ಗಣಿಗ ಅಧ್ಯಕ್ಷತೆ ವಹಿಸಿದ್ದರು. ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯೀಂ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಇತರರಿದ್ದರು.