

ಹುಬ್ಬಳ್ಳಿ: ಸ್ವಾತಂತ್ರ್ಯೊತ್ಸವ ಹಾಗೂ ಗಣರಾಜ್ಯೋತ್ಸವ ಸಂದರ್ಭಗಳಿಗೆ ಸೀಮಿತವಾಗದೇ ನಮ್ಮಲ್ಲಿ ಪ್ರತಿಕ್ಷಣವೂ ದೇಶಭಕ್ತಿ ಬೆಳಗಬೇಕು ಎಂದು ಮೇಯರ್ ವೀಣಾ ಬರದ್ವಾಡ ಕರೆ ನೀಡಿದರು.
ಇಲ್ಲಿಯ ಹು-ಧಾ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯ್ಕಾಗಿ ಹೋರಾಟ ನಡೆಸಿದವರ ಧೈರ್ಯ, ತ್ಯಾಗ, ಬಲಿದಾನದ ಬಗ್ಗೆ ನಾವೆಲ್ಲ ಅಭಿಮಾನ ಪಡುವ ದಿನವಿದು. ಈ ಸಂದರ್ಭದಲ್ಲಿ ಹು-ಧಾ ಅವಳಿ ನಗರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಮಾತನಾಡಿ, ಅವಳಿ ನಗರದಲ್ಲಿ ಮಹಾತ್ಮಾ ಗಾಂಧಿ ನಗರೋತ್ಥಾನ ಯೋಜನೆಯ 126 ಕೋಟಿ ರೂ. ವೆಚ್ಚದಲ್ಲಿ ಶೇ. 90 ರಷ್ಟು ಕೆಲಸ ಪೂರ್ಣಗೊಂಡಿದೆ. 15ನೇ ಹಣಕಾಸು ಯೋಜನೆಯ 40.39 ಕೋಟಿ ರೂ. ವೆಚ್ಚದಲ್ಲಿ ಕ್ರಿಯಾಯೋಜನೆ ತಯಾರಿಸಿ ಅನುಮೋದನೆಗೆ ಜಿಲ್ಲಾಧಿಕಾರಿಗೆ ಕಳುಹಿಸಲಾಗಿದೆ. ಎಸ್ಎಫ್ಸಿ ಯಡಿ 14.14 ಕೋಟಿ ರೂ. ಮಂಜೂರಾಗಿದೆ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ರಾಮಪ್ಪ ಬಡಿಗೇರ, ನಿರಂಜನ ಹಿರೇಮಠ, ಶಿವು ಮೆಣಸಿನಕಾಯಿ, ಮೀನಾಕ್ಷಿ ವಂಟಮೂರಿ, ಪೂಜಾ ಶೇಜವಾಡಕರ, ಇತರರು ಇದ್ದರು.
ಸಹಾಯಕ ಆಯುಕ್ತ ಎಸ್.ಸಿ. ಬೇವೂರ ವಂದಿಸಿದರು.
ಕಾರವಾರ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಭಾಗಿಯಾಗಿದ್ದರು.
ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ ಧ್ವಜಾರೋಹಣ ನೆರವೇರಿಸಿದರು. ಮಾಜಿ ಸಿಎಂ ಜಗದೀಶ ಶೆಟ್ಟರ್, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಮಾಜಿ ಶಾಸಕ ಎಂ.ಎಸ್. ಅಕ್ಕಿ, ದೊಡ್ಡರಾಮಪ್ಪ ದೊಡಮನಿ, ನವೀದ ಮುಲ್ಲಾ, ಇತರರು ಇದ್ದರು.