ಆ.15ರಂದು ಅಮೃತ ಸರೋವರ ದಡದಲ್ಲಿ ಸ್ವಾತಂತ್ರ್ಯೋತ್ಸವ: ಜಿಲ್ಲೆಯ 136 ಸರೋವರದಲ್ಲಿ ತಿರಂಗಯಾತ್ರೆಗೆ ಸಿದ್ಧತೆ

2
Published on

ಮಂಡ್ಯ: ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲೆಯಲ್ಲಿ 136 ಅಮೃತ ಸರೋವರಗಳನ್ನು ಪುನಶ್ಚೇತನ ಮತ್ತು ಹೊಸದಾಗಿ ನಿರ್ಮಿಸಲಾಗಿದೆ. ಅದರಂತೆಯೇ ಆ.15ರಂದು 76 ನೇ ಸ್ವಾತಂತ್ರ ದಿನಾಚರಣೆ ಅಂಗವಾಗಿ ಅಮೃತ ಸರೋವರಗಳ ದಡದಲ್ಲಿ ತಿರಂಗ ಯಾತ್ರೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಸಿದ್ಧತೆ ನಡೆಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ತಿಳಿಸಿದ್ದಾರೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಪ್ರದೇಶದ ಜಲಮೂಲಗಳನ್ನು ಪುನಶ್ಚೇತನಗೊಳಿಸಿ ಅಮೃತ ಸರೋವರಗಳಾಗಿ ನಿರ್ಮಿಸಲಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ 17 ಕೆರೆ ಅಭಿವೃದ್ಧಿಪಡಿಸಿ ಧ್ವಜಾರೋಹಣ ಮಾಡಲಾಗಿತ್ತು. ಈ ಬಾರಿ 136 ಅಮೃತ ಸರೋವರದಲ್ಲಿ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ತಿರಂಗ ಯಾತ್ರೆಯನ್ನು ಗ್ರಾಮಸ್ಥರೊಂದಿಗೆ ಇಡೀ ಗ್ರಾಮವನ್ನು ಸಂಚರಿಸಿ ನಂತರ ಅಮೃತ ಸರೋವರದ ಬಳಿ ಮುಕ್ತಾಯಗೊಳಿಸುವುದು. ಎಲ್ಲರಿಂದ ಪ್ರತಿಜ್ಞೆ ಕೈಗೊಳ್ಳುವುದು. ಕಾಮಗಾರಿ ಸುತ್ತ ಅರಣ್ಯೀಕರಣ ಮಾಡುವುದಾಗಿದೆ ಎಂದಿದ್ದಾರೆ.

ಸರೋವರದ ತಾಣಗಳಲ್ಲಿ ಮಕ್ಕಳಿಗೆ ಚಿತ್ರಕಲೆ, ಘೋಷಣೆ ಬರೆಯುವುದು, ರಂಗೋಲಿ, ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ಅಂತೆಯೇ ಲಗೋರಿ, ಹಗ್ಗ ಜಗ್ಗಾಟ ಕುಂಟ ಓಟವಿರಲಿದೆ. ಇದರೊಟ್ಟಿಗೆ ಜಿಪಂ ವತಿಯಿಂದ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿರುವ ಉತ್ತಮ ಕಾಮಗಾರಿಗಳಿಗೆ ಅಭಿನಂದಿಸಲಾಗುವುದು. ಜಿಲ್ಲಾದ್ಯಂತ 155 ಅಮೃತ ಸರೋವರಗಳ ಪೈಕಿ 136 ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು, ಸ್ವಾತಂತ್ರ್ಯೋತ್ಸವ ಆಚರಿಸಲು ಸಕಲ ಸಿದ್ದತೆ ಮಾಡಿಕೊಳ್ಳಲು ಗ್ರಾಪಂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆ.15ರೊಳಗೆ ಉಳಿದ 19 ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮವಹಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net