ಗ್ರಾಪಂ ಸದಸ್ಯರ ಅನಿರ್ಧಿಷ್ಟಾವಧಿ ಮುಷ್ಕರ ಅಂತ್ಯ

06 TKE 1,1
ಬೇಲೇನಹಳ್ಳಿ ಗ್ರಾಪಂ ಸದಸ್ಯರು ನಡೆಸುತ್ತಿದ್ದ ಮುಷ್ಕರ ನಡೆಸುತ್ತಿದ್ದ ಸ್ಥಳಕ್ಕೆ ಇಒ ಟಿ.ಎಸ್.ಗಣೇಶ್ ಭೇಟಿ ನೀಡಿ ಮಾತುಕತೆ ನಡೆಸಿದರು. ಇ.ಟಿ.ಕಾಂತಕುಮಾರನಾಯ್ಕ, ಇ.ನಾಗರಾಜ್, ಬಿ.ವಿ.ಶಿವಕುಮಾರಸ್ವಾಮಿ, ಸಿ.ಟಿ.ಯೋಗೀಶ್ ಇತರರಿದ್ದರು.
Published on

ತರೀಕೆರೆ: ಸಾರ್ವಜನಿಕರ ಜತೆ ದುರ್ವರ್ತನೆ, ಸ್ಥಳೀಯ ಸಂಸ್ಥೆ ಆಡಳಿತ ಮಂಡಳಿ ಜತೆ ಅಸಹಕಾರ ತೋರುತ್ತಿದ್ದ ಪಿಡಿಒ ಹಾಗೂ ಡೇಟಾ ಎಂಟ್ರಿ ಆಪರೇಟರ್ ನಡೆ ಖಂಡಿಸಿ ಬೇಲೇನಹಳ್ಳಿ ಗ್ರಾಪಂ ಅಧ್ಯಕ್ಷರು, ಸದಸ್ಯರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಮುಷ್ಕರ ಬುಧವಾರ ಅಂತ್ಯಗೊಂಡಿತು.
ಪ್ರತಿಭಟನಾ ಸ್ಥಳಕ್ಕೆ ತಾಪಂ ಇಒ ಟಿ.ಎಸ್.ಗಣೇಶ್ ಮತ್ತು ನರೇಗಾ ಯೋಜನೆ ಸಹಾಯಕ ನಿರ್ದೇಶಕ ಸಿ.ಟಿ.ಯೋಗೀಶ್ ಭೇಟಿ ನೀಡಿ ಧರಣಿ ನಿರತ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷೆ ಹಾಗೂ ಸದಸ್ಯರೊಂದಿಗೆ ಮಾತುಕತೆ ನಡೆಸಿ ಸಾರ್ವಜನಿಕರು, ಗ್ರಾಪಂ ಸದಸ್ಯರ ಕಾರ್ಯಗಳಿಗೆ ಸ್ಪಂದಿಸದ ಪಿಡಿಒ ಅವರನ್ನು ಬೇರೆಡೆಗೆ ವರ್ಗಾಯಿಸುವ ಹಾಗೂ ಡೇಟಾ ಎಂಟ್ರಿ ಆಪರೇಟರ್ ವಿರುದ್ಧ ಮೇಲಾಧಿಕಾರಿಗೆ ವರದಿ ಸಲ್ಲಿಸುವ ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂಪಡೆಯಲಾಯಿತು.
ಸಾರ್ವಜನಿಕರ ಮತ್ತು ಆಡಳಿತ ಮಂಡಳಿ ಸದಸ್ಯರೊಂದಿಗೆ ಅಸಹಕಾರ ನೀಡುತ್ತಿದ್ದ ಪಿಡಿಒ ಅವರನ್ನು ಬೇರೆಡೆ ವರ್ಗಾಯಿಸಲು ಮೇಲಾಧಿಕಾರಿಗಳು ಕೈಗೊಂಡ ಕ್ರಮ ನಮ್ಮ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಗ್ರಾಪಂ ಸದಸ್ಯ ಇ.ನಾಗರಾಜ್ ಸಂತಸ ವ್ಯಕ್ತಪಡಿಸಿದರು.
ಗ್ರಾಪಂ ಅಧ್ಯಕ್ಷ ಇ.ಟಿ.ಕಾಂತ ಕುಮಾರನಾಯ್ಕ, ಉಪಾಧ್ಯಕ್ಷೆ ಡಿ.ಸಿ.ಶ್ರುತಿ, ಬಿ.ವಿ.ಶಿವಕುಮಾರ ಸ್ವಾಮಿ, ನೇತ್ರಮ್ಮ, ಸುಮಿತ್ರಮ್ಮ, ವನಜಾಕ್ಷಿಬಾಯಿ, ಜೆ.ಆರ್.ದಿವ್ಯಾ, ಬಿ.ಎಸ್.ದೀಪಾ, ಸುಂಕಮ್ಮ, ಎಚ್.ಆರ್.ಉಮೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net