ಮೈಸೂರು: ಹಲವಾರು ವರ್ಷಗಳ ತಮ್ಮ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಮೈಸೂರು ವಿವಿ ನಿರ್ಲಕ್ಷ್ಯ ಧೋರಣೆ ತಾಳುತ್ತಿರುವ ಹಿನ್ನೆಲೆಯಲ್ಲಿ ವಿವಿಯ ಸ್ವಚ್ಛತಾ ಕಾರ್ಯ ನಿರ್ವಹಿಸುವವರು ಹಾಗೂ ಇದೇ ರೀತಿಯ ನೌಕರರು ಜ.11ರಿಂದ ಎಐಯುಟಿಯುಸಿ ಸಂಯೋಜಿತ ರಾಜ್ಯ ಸಂಯುಕ್ತ ವಿಶ್ವವಿದ್ಯಾನಿಲಯ ಸ್ವಚ್ಛತಾ ಕಾರ್ಯ ನೌಕರರ ಸಂಘದ ಅಡಿಯಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ ಎಂದು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ಮೇಟಿ ತಿಳಿಸಿದರು.
ಇಪಿಎಫ್‌ಒ ಸಂಸ್ಥೆಯಲ್ಲಿರುವ ಸ್ವಚ್ಛತಾ, ಸಫಾಯಿ ಕಾರ್ಮಿಕರ ಹಣವನ್ನು ಅವರ ಖಾತೆಗಳಿಗೆ ವರ್ಗಾಯಿಸಬೇಕು. ವಿವಿಯಲ್ಲಿ ಕೆಲಸ ಮಾಡುತ್ತಿರುವ ಪೌರ, ಸಫಾಯಿ ಕಾರ್ಮಿಕರಿಗೆ ಕನಿಷ್ಠ ವೇತನ, ಪಿಎಫ್, ಇಎಸ್‌ಐ, ಅಗತ್ಯ ಸುರಕ್ಷತಾ ಪರಿಕರ ನೀಡಬೇಕೆಂದು ಕಳೆದ ಆರು ವರ್ಷಗಳಿಂದ ನಿರಂತರವಾಗಿ ಮನವಿ ಮಾಡುತ್ತಿದ್ದರೂ ಪ್ರಯೋಜನವಾಗಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಕಾರ್ಮಿಕರಿಗೆ ಕನಿಷ್ಠ ವೇತನದ ಹಿಂಬಾಕಿ, ಮೈಸೂರು ವಿವಿಯಿಂದ ಜಪ್ತಿಯಾಗಿ ಇಪಿಎಫ್‌ಒ ಸಂಸ್ಥೆಯಲ್ಲಿರುವ ಹಣವನ್ನು ಕಾರ್ಮಿಕರ ಖಾತೆಗಳಿಗೆ ವರ್ಗಾಯಿಸಲು ಬೇಕಾದ ದಾಖಲೆ ನೀಡಬೇಕು. ಕಾಲಕಾಲಕ್ಕೆ ಪರಿಷ್ಕರಣೆಯಾಗುವ ಕನಿಷ್ಠ ವೇತನ ಹಾಗೂ ವ್ಯತ್ಯಾಸದ ತುಟ್ಟಿಭತ್ಯೆ ಪಾವತಿ ಮಾಡುವಂತೆ ಪದೇ ಪದೆ ಮನವಿ ಮಾಡಿಕೊಳ್ಳುತ್ತಿದ್ದರೂ ನಿರ್ಲಕ್ಷಿಸಲಾಗಿದೆ. ಹೀಗಾಗಿ ಜ.11ರಿಂದ ಬೇಡಿಕೆ ಈಡೇರುವವರೆಗೂ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದರು.
ಪದಾಧಿಕಾರಿಗಳಾದ ಯಶೋದರ್, ಸುಮಾ, ಮೇರಿ, ಸತೀಶ್, ಮುದ್ದುಕೃಷ್ಚ ಹಾಜರಿದ್ದರು.