ಗ್ರಾಮ ಆಡಳಿತ ಅಧಿಕಾರಿಗಳಿಂದ ಅನಿರ್ದಿಷ್ಟಾವಧಿ ಮುಷ್ಕರ

ಹೊಳೆನರಸೀಪುರ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಗ್ರಾಮ ಆಡಳಿತಾಧಿಕಾರಿಗಳು ಅನಿರ್ದಿಷ್ಟಾವಧಿ ಮುಷ್ಕರ ಆರಂಬಿಸಿದರು.
ಹೊಳೆನರಸೀಪುರ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಗ್ರಾಮ ಆಡಳಿತಾಧಿಕಾರಿಗಳು ಅನಿರ್ದಿಷ್ಟಾವಧಿ ಮುಷ್ಕರ ಆರಂಬಿಸಿದರು.
Published on

ಹೊಳೆನರಸೀಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಆಡಳಿತ ಅಧಿಕಾರಿಗಳು ಸೋಮವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು.

ಪಟ್ಟಣದ ತಾಲೂಕು ಕಚೇರಿಯ ಮುಂದೆ ಶಾಂತಿಯುತವಾಗಿ ಮುಷ್ಕರ ಆರಂಭಿಸಿದ್ದು, ವಿಷಯ ತಿಳಿದ ಶಾಸಕ ಎಚ್.ಡಿ.ರೇವಣ್ಣ ಸ್ಥಳಕ್ಕೆ ಆಗಮಿಸಿ ಮುಷ್ಕರ ನಿರತರಿಂದ ಮನವಿ ಸ್ವೀಕರಿಸಿದರು.

ನಿಮ್ಮ ಬೇಡಿಕೆಗಳನ್ನು ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರ ಗಮನಕ್ಕೆ ತರುತ್ತೇನೆ. ಆ ಮೂಲಕ ಬೆಂಬಲವಾಗಿ ನಿಂತು ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.

ಕಂದಾಯ ನೌಕರರ ಸಂಘದ ತಾಲೂಕು ಅಧ್ಯಕ್ಷ ಆರ್.ಪೃಥ್ವಿರಾಜ್ ಮಾತನಾಡಿ, ಈ ಹಿಂದೆ ಮುಷ್ಕರ ನಡೆಸಿದಾಗ ಅಧಿಕಾರಿಗಳಾಗಲಿ ಅಥವಾ ಸರ್ಕಾರವಾಗಲಿ ಸಮಸ್ಯೆ ಬಗೆಹರಿಸಲಿಲ್ಲ. ಹೀಗಾಗಿ ರಾಜ್ಯ ವ್ಯಾಪಿ ಎರಡನೇ ಹಂತದಲ್ಲಿ ಶಾಂತಿಯುತ ಮುಷ್ಕರ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

ಗ್ರಾಮ ಆಡಳಿತ ಅಧಿಕಾರಿಗಳಿಗೆ ಸೌಲಭ್ಯ ಕಲ್ಪಿಸಬೇಕು. ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿಯನ್ನು ಇಲ್ಲಿಯೂ ನಿಗದಿಪಡಿಸಿ ಆದೇಶ ನೀಡಬೇಕು. ಸೇವಾ ವಿಷಯಗಳು ಸಂಬಂಧಿಸಿದಂತೆ ಸೌಲಭ್ಯ ಕಲ್ಪಿಸಬೇಕು. ಅಂತರ್ಜಿಲ್ಲಾ ವರ್ಗಾವಣೆಯನ್ನು ಮರು ಸ್ಥಾಪಿಸಬೇಕು ಅಥವಾ ಇತರ ಎಲ್ಲ ಇಲಾಖೆಗಳಲ್ಲಿರುವಂತೆ ಕಂದಾಯ ಇಲಾಖೆಯಲ್ಲಿ ವರ್ಗಾವಣೆಗಾಗಿ ವಿಶೇಷ ಮಾರ್ಗಸೂಚಿ ರಚಿಸಬೇಕು. ಇದಲ್ಲದೆ ಅನುಕಂಪದ ನೇಮಕಾತಿಗೆ ತಿದ್ದುಪಡಿ ಮಾಡುವುದರ ಜತೆಗೆ ಕ್ಷೇತ್ರ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸುವಾಗ ಜೀವ ಹಾನಿಯಾನಿಯಾದರೆ ಅಂತಹವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಮಂಜೂರು ಮಾಡುವುದು ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ತಾಲೂಕು ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ವಿಷ್ಣು, ಗ್ರಾಮ ಲೆಕ್ಕಾಧಿಕಾರಿಗಳಾದ ಹರೀಶ್, ಹೇಮಾ, ದೀಪಶ್ರೀ, ರಂಜಿತಾ, ಲೋಕೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net