

ರೋಣ: ರಾಜ್ಯದಲ್ಲಿ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಬೇಡಿಕೆಗಳನ್ನು ಈಡೇರಿಸದಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಮೇ 27ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ರಾಜ್ಯ ಪೌರ ನೌಕರರ ಸಂಘ ರೋಣ ತಾಲೂಕು ಘಟಕದಿಂದ ತಹಸೀಲ್ದಾರ್ರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಉಪಾಧ್ಯಕ್ಷ ಎಚ್.ಎನ್. ಬಳ್ಳಾರಿ ಮಾತನಾಡಿ, 2025ರ ಮಾರ್ಚ್ 27ರಂದು ಪೌರಾಡಳಿತ ಸಚಿವ ರಹಿಮಾನಖಾನ್ ಅವರ ಮನೆ ಎದುರು ನಮ್ಮ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಒಂದು ದಿನ ಶಾಂತಿಯುತ ಧರಣಿ ನಡೆಸಲಾಗಿತ್ತು. ಆಗ ಪೌರಾಡಳಿತ ಸಚಿವರು ಮುಖ್ಯಮಂತ್ರಿಗಳೊಂದಿಗೆ ರ್ಚಚಿಸಿ ರಾಜ್ಯ ಪದಾಧಿಕಾರಿಗಳೊಂದಿಗೆ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಸಭೆ ನಡೆಸುವ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಯಾವುದೇ ಚರ್ಚೆ ನಡೆಸದೇ ಸಭೆ ಕರೆದಿಲ್ಲ. ಬೇಡಿಕೆಗಳನ್ನೂ ಈಡೇರಿಸಿಯೂ ಇಲ್ಲ. ಹೀಗಾಗಿ ಮೇ 27ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು. ನಮ್ಮ ಬೇಡಿಕೆಗಳು ಈಡೇರುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಲಾಯಿತು.
ಮಾರುತಿ ಚಲುವಾದಿ, ರಾಜು ಮಾಡಲಗೇರಿ, ಬಸವರಾಜ ಕರೇಸೂರ, ಪರೀದ ಸರವರ, ಎಸ್.ಎಸ್. ಮಾಮನಿ ಸೇರಿ ಪೌರ ನೌಕರರು, ಪೌರಕಾರ್ವಿುಕರು ಸಿಬ್ಬಂದಿ ಉಪಸ್ಥಿತರಿದ್ದರು.