

ಮಂಡ್ಯ: ಪೌರ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪೌರ ನೌಕರರ ಸಂಘದ ಕಾರ್ಯಕರ್ತರು ಮತ್ತು ನಗರಸಭೆ ಪೌರ ಸೇವಾ ನೌಕರರು ನಗರದಲ್ಲಿ ಅನಿರ್ದಿಷ್ಟಾವದಿ ಧರಣಿ ಆರಂಭಿಸಿದರು.
ನಗರಸಭೆ ಎದುರು ಜಮಾವಣೆಗೊಂಡು ಕಾರ್ಯಕರ್ತರು ಹಾಗೂ ಕಚೇರಿಗೆ ಬಾಗಿಲು ಬೀಗ ಜಡಿದ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿ ಘೋಷಣೆ ಕೂಗಿದರು. ಸಂಜೆವರೆಗೂ ಯಾವುದೇ ನಗರಸಭೆ ಕೆಲಸಕಾರ್ಯಗಳನ್ನು ಮಾಡಲಿಲ್ಲ. ಸಾರ್ವಜನಿಕರು ಬಂದು ಬಾಗಿಲು ಹಾಕಿರುವುದನ್ನು ನೋಡಿ ವಾಪಸ್ ಹೋಗುತ್ತಿದ್ದರು.
ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಪೌರ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಸಂಘದ ಕಾರ್ಯಕಾರಣಿ ಸಭೆಯಲ್ಲಿ ನಿರ್ಣಯ ಕೈಗೊಂಡು ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ ಮನವಿ ಸಲ್ಲಿಸಿ 45 ದಿನಗಳಾದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಕಾರಣ ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ಕಿಡಿಕಾರಿದರು.
ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಪೌರ ನೌಕರರು ಕಸ ಸಂಗ್ರಹ, ವಿಲೇವಾರಿ, ಸ್ವಚ್ಚತೆ, ನೀರು ಪೂರೈಕೆ, ಒಳಚರಂಡಿ ನಿರ್ವಹಣೆ ಕೆಲಸಗಳನ್ನು ಸ್ಥಗಿತಗೊಳಿಸಲಿದ್ದಾರೆ. ಬೇಡಿಕೆ ಈಡೇರುವರೆವಿಗೂ ಧರಣಿ ಕೈಬಿಡುವುದಿಲ್ಲ, ನಗದು ರಹಿತ ಆರೋಗ್ಯಚಿಕಿತ್ಸಾ ಸೌಲಭ್ಯ ಯೋಜನೆಯಾದ ಜ್ಯೋತಿ ಸಂಜೀವಿನಿಯನ್ನು ಪೌರ ನೌಕರರಿಗೂ ವಿಸ್ತರಿಸಬೇಕು. ಸರ್ಕಾರಿ ನೌಕರರಿಗೆ ಸಿಗುವ ಎಲ್ಲ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯದ ನಗರ ಸ್ಥಳೀಯಸಂಸ್ಥೆಗಳಲ್ಲಿ ಹೊರಗುತ್ತಿಗೆಯಡಿ ಕೆಲಸ ನಿರ್ವಹಿಸುತ್ತಿರುವ ನೀರು ಸರಬರಾಜುದಾರರ, ವಾಹನ ಚಾಲಕರು, ಲೋಡರ್ಸ್‌ಗಳು, ಕ್ಲೀನರ್‌ಗಳು, ಸ್ವಚ್ಚತಾ ಮೇಲ್ವಿಚಾರಕರು, ಉದ್ಯಾನ ನಿರ್ವಹಣೆಗಾರರು ಸೇರಿದಂತೆ ವಿವಿಧ ವೃಂದದ ಹೊರಗುತ್ತಿಗೆ ನೌಕರರನ್ನು ನೇರ ಪಾವತಿಗೆ ಒಳಪಡಿಸಬೇಕು. ದಿನಗೂಲಿ ಕ್ಷೇಮಾಭಿವೃದ್ಧಿ ಸಮಾನ ಕೆಲಸಕ್ಕೆ ಸಮಾನ ವೇತನ, ಟೈಮ್ ಸ್ಕೆಲ್ ನೌಕರರ ಖಾಲಿ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ವಾಹನ ಚಾಲಕರು, ನೀರು ಪೂರೈಕೆ ನೌಕರರು ನೇರ ಪಾವತಿ ಪೌರ ಕಾರ್ಮಿಕರನ್ನು ಖಾಯಂಗೊಳಿಸಬೇಕು. ನೌಕರರಿಗೆ ಎಸ್‌ಎಫ್‌ಸಿ ಮುಕ್ತ ನಿಧಿಯಿಂದ ವೇತನ ನೀಡಬೇಕು. ಸರ್ಕಾರ ನಮ್ಮ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದರೆ ನಿರಂತರ ಧರಣಿ ಮಾಡುವ ಮೂಲಕ ಕಚೇರಿಗಾಗಲೀ ಅಥವಾ ಸ್ವಚ್ಛತೆಗಾಗಲಿ ಹೋಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಹೊರ ಗುತ್ತಿಗೆ ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣ, ಪೌರ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ನಾಗರಾಜು, ಅರ್ಚನಾ, ಗಿರೀಶ್ ಎಲೆಚಾಕನಹಳ್ಳಿ, ದಿನೇಶ್, ಮುತ್ತಾಲಯ್ಯ, ಮಹದೇವು, ನಾಗೇಶ್, ರಾಜೇಗೌಡ, ಹೊನ್ನಯ್ಯ, ಬೊಮ್ಮಯ್ಯ, ಅಮ್ಮಯ್ಯಮ್ಮ, ಮಹದೇವು ಭಾಗವಹಿಸಿದ್ದರು.