

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲಾ ಪಂಚಾಯಿತಿ ನಿವೃತ್ತ ಉಪ ಕಾರ್ಯದರ್ಶಿ ವೈ.ಡಿ. ಕುನ್ನಿಭಾವಿ ಎಂಬುವರು ಪಿಡಿಒಗಳಿಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ. ಸರ್ಕಾರಿ ಕಚೇರಿಗಳಿಗೆ ತೆರಳಿ ನಿವೃತ್ತರಾದರೂ ದರ್ಪ ತೋರಿ ಅಧಿಕಾರಿಗಳನ್ನು ಬೆದರಿಸುತ್ತಿದ್ದಾರೆ. ಅವರ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಾಗಿದ್ದು, ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದಿ0ದ ಜಿ.ಪಂ. ಎದುರು ಸೋಮವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಯಿತು.
ಸಂಘದಿ0ದ ನಿರ್ಣಯ ಕೈಗೊಂಡು ಕೆಲಸ ಬಹಿಷ್ಕರಿಸಿದ ಪಿಡಿಒಗಳು ಜಿ.ಪಂ. ಆವರಣದಲ್ಲಿ ಜಮಾಯಿಸಿದರು. ಪಿಡಿಒಗಳ ಹೋರಾಟಕ್ಕೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು, ಬಿಲ್ ಕಲೆಕ್ಟರ್‌ಗಳು ಹಾಗೂ ಎಲ್ಲ ಸಿಬ್ಬಂದಿ ಬೆಂಬಲ ನೀಡಿದರು. ಅಲ್ಲದೆ, ಸರ್ಕಾರಿ ನೌಕರರರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ದನಗೌಡರ ಹಾಗೂ ಪದಾಧಿಕಾರಿಗಳು ಬೆಂಬಲ ಸೂಚಿಸಿದರು.
ವೈ.ಡಿ. ಕುನ್ನಿಭಾವಿ ಅವರು ನಿವೃತ್ತರಾದರೂ ಕರ್ತವ್ಯದಲ್ಲಿರುವ ಭ್ರಮೆಯಲ್ಲಿ ಸರ್ಕಾರಿ ಕಚೇರಿಗಳಿಗೆ ತೆರಳಿ ಕೆಲಸಕ್ಕೆ ಅಡ್ಡಿಪಡಿಸುತ್ತಾರೆ. ಇಲ್ಲಸಲ್ಲದ ಆರೋಪ ಮಾಡಿ ನಿಂದಿಸುತ್ತಾರೆ. ಆರ್‌ಟಿಐ ಅರ್ಜಿ ಹಾಕಿ ವಿನಾಕಾರಣ ಕಿರುಕುಳ ನೀಡುತ್ತಾರೆ. ಅವರ ಕಿರುಕುಳದಿಂದ ಅನೇಕ ನೌಕರರು ಮಾನಸಿಕವಾಗಿ ನೊಂದಿದ್ದಾರೆ. ಈ ಹಿಂದೆ ಅವರನ್ನು 2 ಬಾರಿ ಕಪ್ಪುಪಟ್ಟಿಗೆ ಸೇರಿಸಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಕೆಲ ದಿನಗಳ ಹಿಂದೆ ಜಾತಿನಿಂದನೆ ಮಾಡಿರುವ ಕುರಿತು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾದರೂ ಇನ್ನೂ ಬಂಧಿಸಿಲ್ಲ. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿ.ಪಂ. ಸಿಇಒ ಭುವನೇಶ ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದರು.
ಸ0ಘದ ಅಧ್ಯಕ್ಷೆ ಪುಷ್ಪಾವತಿ ಮೇದಾರ, ಮಾಜಿ ಅಧ್ಯಕ್ಷ ನಾಗರಾಜ ಬಿದರಳ್ಳಿ, ಪದಾಽಕಾರಿಗಳಾದ ಬಿ.ಎ. ಮಡಿವಾಳರ, ಪ್ರವೀಣ ಗಣಿ, ಸವಿತಾ ಕಬ್ಬೇರ, ತಾ.ಪಂ. ಇಒ ಗಂಗಾಧರ ಕಂದಕೂರ, ಸಹಾಯಕ ನಿರ್ದೇಶಕರಾದ ಚಂದ್ರು ಪೂಜಾರ ಮತ್ತು ಗಿರೀಶ ಕೋರಿ, ಸಂಘದ ಸದಸ್ಯರಾದ ಶಶಿಕಾಂತರಡ್ಡಿ ಮಂಟೂರ, ಸಂಗಮೇಶ ಸಜ್ಜನ, ಶಶಿಧರ ಗಂಧದ, ವೀರೂಪಾಕ್ಷ ಕುಲಕರ್ಣಿ, ಕಿರಣ ಕಲ್ಲೂರ, ಇತರರು ಪಾಲ್ಗೊಂಡಿದ್ದರು.