ಹಿರೇಕೆರೂರ ಪಪಂ ಎದುರು ಅನಿರ್ದಿಷ್ಟಾವಧಿ ಧರಣಿ

hirekerur town panchayat
Published on

ಹಿರೇಕೆರೂರ: ಹಲವು ವರ್ಷಗಳಿಂದ ವಾರ್ಷಿಕ ಟೆಂಡರ್ ಕರೆಯದಿರುವುದನ್ನು ಖಂಡಿಸಿ ಹಾಗೂ ಅಕ್ರಮಗಳ ತನಿಖೆಗೆ ಆಗ್ರಹಿಸಿ ಸ್ಥಳೀಯ ಪಟ್ಟಣ ಪಂಚಾಯಿತಿ ಎದುರು ಸದಸ್ಯ ರಮೇಶ ತೋರಣಗಟ್ಟಿ ನೇತೃತ್ವದಲ್ಲಿ ಮಂಗಳವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

ರಮೇಶ ತೋರಣಗಟ್ಟಿ ಮಾತನಾಡಿ, 2022ರ ಡಿಸೆಂಬರ್ ಸಾಮಾನ್ಯ ಸಭೆಯಲ್ಲಿ ಜಿ.ಪಿ. ಇಲೆಕ್ಟ್ರಿಕಲ್ ಅವರಿಗಿದ್ದ ಬೀದಿದೀಪ ನಿರ್ವಹಣೆ ಟೆಂಡರ್ ಮುಕ್ತಾಯಗೊಳಿಸಲು ತೀರ್ವನಿಸಲಾಗಿತ್ತು. ಆದರೂ, ಈವರೆಗೆ ಜಿ.ಪಿ. ಇಲೆಕ್ಟ್ರಿಕಲ್ ನಿರ್ವಹಣೆ ಮಾಡುತ್ತಿದೆ. ಹೊಸದಾಗಿ ಟೆಂಡರ್ ಕರೆದಿಲ್ಲ. 2023ರ ಜನವರಿಯಿಂದ ಆಗಸ್ಟ್​ವರೆಗೆ ಪಪಂ ವತಿಯಿಂದಲೇ ಬೀದಿದೀಪ ನಿರ್ವಹಣೆ ಮಾಡಲಾಗಿದೆ. ಈ ಅವಧಿಯ ಬಿಲ್ ಅನ್ನು ಜಿ.ಪಿ. ಇಲೆಕ್ಟ್ರಿಕಲ್ ಹೆಸರಿನಲ್ಲಿ ತೆಗೆಯಲಾಗಿದೆ. ಅನಧಿಕೃತವಾಗಿ ಟೆಂಡರ್ ಮುಂದುವರಿಸಿದ್ದಾರೆ ಎಂದು ಆರೋಪಿಸಿದರು.

ಅಯ್ಯಪ್ಪಸ್ವಾಮಿ ನಗರದ ಪಾಟೀಲರ ಪ್ಲಾಟ್​ಗೆ, ತಿಪ್ಪಶೆಟ್ಟಿ ಕೆರೆಯಲ್ಲಿ ಅನಧಿಕೃತವಾಗಿ ರಸ್ತೆಗೆ ಸ್ಥಳ ನೀಡಿದ್ದು, ಈ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇ-ಸ್ವತ್ತು, ಬಿ-ಖಾತೆ ನೀಡುತ್ತಿರುವುದನ್ನು ನಿಲ್ಲಿಸಬೇಕು. 2021-22ನೇ ಸಾಲಿನ ಎಸ್ಸಿ ಮತ್ತು ಎಸ್​ಟಿ ಸಮುದಾಯಕ್ಕೆ ಮೀಸಲಿಟ್ಟ ಹಣ ಬಳಕೆ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಪಪಂ ಕಚೇರಿಗೆ ಕೆಲ ಅಧಿಕಾರಿಗಳು ಸರಿಯಾದ ವೇಳೆಗೆ ಆಗಮಿಸುತ್ತಿಲ್ಲ. ಇನ್ನು ಕೆಲವರು ಸೇವೆಗೆ ಹಾಜರಾಗದಿದ್ದರೂ ಅಂತಹವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವವರೆಗೆ ಧರಣಿ ನಿಲ್ಲಿಸುವುದಿಲ್ಲ ಎಂದರು.<

ಅಶೋಕ ಮಡಿವಾಳರ, ಗುಡದಯ್ಯ ತೋಂಬ್ರಿ, ವೀರೇಶ ಕಮಲಿದಿನ್ನಿ, ಆದಿಲ್ ರಾಣೆಬೆನ್ನೂರ, ತನ್ವೀರ್ ರಾಣೆಬೆನ್ನೂರ, ಸಿಕಂದರ್ ಹೊಸಳ್ಳಿ, ಆಸೀಫ್ ಕಚವಿ, ಪ್ರಕಾಶ ಬಾಗಲಕೋಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net