

ರಾಯಚೂರು ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಿಕ್ಷಣ ಸಂಸ್ಥೆಗಳ ಗುತ್ತಿಗೆ ಕಾರ್ಮಿಕರಿಗೆ ಕನಿಷ್ಟ ವೇತನ ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಆ.25 ರಿಂದ ರಾಜ್ಯ ಕ್ರೈಸ ವಸತಿ ಶಾಲೆ ಹೊರಗುತ್ತಿಗೆ ಡಿ.ಗ್ರೂಪ್ ನೌಕರರ ಸಂಘದಿಂದ ಅನಿರ್ದಿಷ್ಟಧರಣಿ ನಡೆಸಲು ನಿರ್ಧರಿಸಲಾಗಿದೆಂದು ಟಿಯುಸಿಐ ರಾಜ್ಯ ಸಂಚಾಲಕ ಆರ್.ಮಾನಸಯ್ಯ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಜಾತಿ, ಪರಿಶೀಷ್ಟ ಪಂಗಡ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣ ನೀಡಲು ನವೋದಯ ಮಾದರಿಯ ವಿಶೇಷ ಶಾಲೆಗಳನ್ನು ಪ್ರಾರಂಭಿಸಲಾಗಿದೆ. 2017 ರಿಂದ ಇಲ್ಲಿಯವರೆಗೆ ವಸತಿ ಶಿಕ್ಷಣ ಸಂಸ್ಥೆಗಳ ಗುತ್ತಿಗೆ ಕಾರ್ಮಿಕರಿಗೆ ಕನಿಷ್ಟ ವೇತನವೂ ಪಾವತಿ ಮಾಡುತ್ತಿಲ್ಲ. ಹೊರಗುತ್ತಿಗೆ ಏಜೆನ್ಸಿಗಳು ಸಕಾಲಕ್ಕೂ ವೇತನವೂ ಪಾವತಿಸುತ್ತಿಲ್ಲ.
ವಾರದ ರಜೆ, ರಾಷ್ಟ್ರೀಯ ಹಬ್ಬದ ರಜೆಯೂ ಇಲ್ಲದೇ ಶೋಷಣೆ ಮಾಡಲಾಗುತ್ತಿದೆ. ಕಾರ್ಮಿಕ ಕಾಯ್ದೆಗಳನ್ನು ಸರ್ಕಾರವೇ ಉಲ್ಲಂಘಿಸುತ್ತಿದೆ ಎಂದು ಆರೋ ಪಿಸಿದರು. ಒಂದು ವಸತಿ ಶಾಲೆಗೆ 11 ಸಿಬ್ಬಂದಿಗಳನ್ನು ನೀಡಲಾಗಿದೆ. 250 ಜನ ಒಂದು ಶಾಲೆಯಲ್ಲಿ ವಿದ್ಯಾರ್ಥಿಗಳಿದ್ದು, ಎಲ್ಲಾ ಮಕ್ಕಳಿಗೆ ರೊಟ್ಟಿ ಮಾಡಲು ಸಾಧ್ಯವೇ ಆಗುವದಿಲ್ಲ. ಅವೈಜ್ಞಾನಿಕವಾಗಿ ಸಿಬ್ಬಂದಿಗಳನ್ನು ಗುತ್ತಿಗೆ ಮೂಲಕ ನೇಮಿಸಿಕೊಂಡು ಕಾರ್ಮಿಕ ಕಾಯ್ದೆಗಳನ್ನು ಉಲ್ಲಂಘಿಸಿ ಸೇವೆ ಪಡೆಲಾಗುತ್ತಿದೆ.
ಗುತ್ತಿಗೆ ಏಜೆನ್ಸಿಗಳು ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದ್ದರೂ ಸಚಿವರು,ಶಾಸಕರುಗಳ ಮೌನ ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರೂ ಸೇರಿ ಇಬ್ಬರು ಸಚಿವರುಗಳಿದ್ದಾರೆ. ಅವರಲ್ಲಿಯೇ ಪೈಪೋಟಿ ನಡೆಯುತ್ತಿದೆ. ಕಾರ್ಮಿಕರ ಮಾಸಿಕ ವೇತನದಲ್ಲಿ ಕಡಿತಗೊಳಿಸುತ್ತಿರುವ ಲಕ್ಷಾಂತಣ ಹಣ ಯಾರ ಜೇಬಿಗೆ ಸೇರುತ್ತಿದೆ ಎಂಬುದು ಗೊತ್ತಿಲ್ಲ.
ನಿಷೇಧಿತ ಹೊರಗುತ್ತಿಗೆ ಪದ್ದತಿಯನ್ನು ಸರ್ಕಾರವೇ ಪೋಷಣೆ ಮಾಡುತ್ತಾ ಎಲ್ಲಾಹೊರಗುತ್ತಿಗೆ ನೌಕರರ ವೇತನದಲ್ಲಿಯೂ ಕಡಿತಗೊಳಿಸುತ್ತಿರುವ ನಡೆಯುತ್ತಿದೆ. ಸಚಿವರು, ಶಾಸಕರ ಪ್ರಭಾವ ಇಲ್ಲದೇ ಇಷ್ಟೊಂದು ಅಕ್ರಮ ನಡೆಯಲು ಸಾಧ್ಯವಿಲ್ಲ ಎಂದರು.ಈ ಸಂದರ್ಭದಲ್ಲಿ ಟಿಯುಸಿಐ ರಾಜ್ಯಾಧ್ಯಕ್ಷ ಎಂ.ಡಿ.ಅಮೀರ ಅಲಿ, ರಾಜ್ಯ ಉಪಾಧ್ಯಕ್ಷ ರಂಗನಾಥ, ಹುಸೇನಪ್ಪ, ಲಾಳೇಸಾಬ್, ಲತಾ ಹನುಮಂತ, ಶಿವರಾಜ ಇದ್ದರು.