8ನೇ ದಿನಕ್ಕೆ ಕಾಲಿಟ್ಟ ಅನಿರ್ದಿಷ್ಟಾವಧಿ ಧರಣಿ

17-SEP-GPT-3
ಗುಂಡ್ಲುಪೇಟೆ ಪಟ್ಟಣದ ಎಪಿಎಂಸಿ ಆವರಣದಲ್ಲಿ ಸೂರ್ಯಕಾಂತಿ ಬೆಂಬಲಬೆಲೆ ಯೋಜನೆಯಲ್ಲಿ ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸಿ ಅರಿಶಿನ ಬೆಳೆಗಾರರ ಒಕ್ಕೂಟದ ಪ್ರತಿನಿಧಿಗಳು ಏಳನೇ ದಿನವೂ ಅನಿರ್ದಿಷ್ಟಾವಧಿ ಧರಣಿ ನಡೆಸಿದರು.
Published on

ಗುಂಡ್ಲುಪೇಟೆ: ಸೂರ್ಯಕಾಂತಿ ಬೆಂಬಲಬೆಲೆ ಯೋಜನೆಯಲ್ಲಿ ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸಿ ಅರಿಶಿನ ಬೆಳೆಗಾರರ ಒಕ್ಕೂಟದ ಪ್ರತಿನಿಧಿಗಳು ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಬುಧವಾರ ಏಳನೇ ದಿನ ಪೂರೈಸಿದೆ.

ಸಂಘಟನೆಯ ಸಂಚಾಲಕ ಎಸ್.ಎಂ.ನಾಗಾರ್ಜುನಕುಮಾರ್ ಮಾತನಾಡಿ, ಕೇಂದ್ರ ಸರ್ಕಾರವು ಕರ್ನಾಟಕದ ರೈತರ ಹಿತಾಸಕ್ತಿಗಳನ್ನು ನಿರ್ಲಕ್ಷಿಸಿದೆ. ಖರೀದಿ ಕೇಂದ್ರ ತೆರೆಯಲು ರಾಜ್ಯ ಸರ್ಕಾರ ಎರಡು ತಿಂಗಳ ಹಿಂದೆಯೇ ಪತ್ರ ಬರೆದು ಪ್ರಸ್ತಾವನೆ ಸಲ್ಲಿಸಿದ್ದರೂ ಅದನ್ನು ಪರಿಗಣಿಸಿಲ್ಲ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಸೂರ್ಯಕಾಂತಿಯನ್ನು ಗುಂಡ್ಲುಪೇಟೆ ಭಾಗದಲ್ಲಿ ಅತಿ ಹೆಚ್ಚಾಗಿ ಬೆಳೆಯುತ್ತಿರುವುದರಿಂದ ಕೇಂದ್ರ ಸರ್ಕಾರಕ್ಕೆ ತಾವು ಖರೀದಿಗೆ ಕ್ರಮ ಜರುಗಿಸಲು ಒತ್ತಾಯಿಸಬೇಕು ಎಂದು ಮನವಿ ಸಲ್ಲಿಸಲಾಗಿತ್ತು. ಬಳಿಕ ಕುಮಾರಸ್ವಾಮಿಯವರೇ ಖುದ್ದಾಗಿ ಪತ್ರ ಬರೆದಿದ್ದರೂ ಸಹ ಇದುವರೆವಿಗೂ ಯಾವುದೇ ರೀತಿಯಾದ ತುರ್ತು ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಕೃಷಿ ಉತ್ಪನ್ನ ಮಾರಾಟ ಇಲಾಖೆ ನಿರ್ದೇಶಕ ಶಿವಾನಂದ್ ಕಪಾಶಿ ಅವರು ಸಹ ಬೆಂಬಲ ಬೆಲೆ ಯೋಜನೆಯ ಅನುಷ್ಠಾನಕ್ಕೆ ಮನವಿ ಮಾಡಿದ್ದರೂ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರುತ್ತಿದೆ. ಗುಂಡ್ಲುಪೇಟೆ ಭಾಗದಲ್ಲಿ 38 ಸಾವಿರ ಕ್ವಿಂಟಾಲ್ ಸೂರ್ಯಕಾಂತಿಯನ್ನು ಕಡಿಮೆ ಬೆಲೆಗೆ ಖರೀದಿ ಮಾಡಲಾಗಿದೆ. ಒಂದು ವೇಳೆ ಬೆಂಬಲ ಬೆಲೆ ಕಾನೂನು ಇದ್ದಿದ್ದೇ ಆಗಿದ್ದಲ್ಲಿ ಉತ್ತಮ ಬೆಲೆ ದೊರೆಯುತ್ತಿತ್ತು. ಆದ್ದರಿಂದ ಬೆಂಬಲ ಬೆಲೆ ಕುರಿತಂತೆ ಕೇಂದ್ರ ಸರ್ಕಾರ ತುರ್ತಾಗಿ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ಸೂರ್ಯಕಾಂತಿ, ಉದ್ದು, ಹೆಸರುಕಾಳು, ಸೋಯಾ ಬೀನ್ಸ್‌ನ ಬೆಂಬಲ ಬೆಲೆಗಾಗಿ ರಾಜ್ಯ ಸರ್ಕಾರ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದೆ. ಆದರೆ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಅಂಗೀಕಾರ ಮಾಡದೆ ಅಸಡ್ಡೆತನ ತೋರಲಾಗಿದೆ ಎಂದು ಕಿಡಿಕಾರಿದರು. ಪ್ರಧಾನ ಮಂತ್ರಿಗಳು ತಾರತಮ್ಯ ಮಾಡದೆ ಸಮಾನ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ಆಳುವ ಸರ್ಕಾರಗಳಿಗೆ ಮತದಾರರ ಸಮಸ್ಯೆಗೆ ದನಿಯಾಗುವಂತ ಮೌಲ್ಯವಿರಬೇಕು. ಈ ಯೋಜನೆಗಳಿಂದ ಸರಿಸುಮಾರು 2 ಲಕ್ಷ ರೈತ ಕುಟುಂಬಗಳಿಗೆ ಸಹಾಯವಾಗುತ್ತದೆ ಎಂದರು.

ಕೆಂಪುಕೋಟೆಯಲ್ಲಿ ಭಾಷಣ ಮಾಡುವ ವೇಳೆ 2025ಕ್ಕೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಮಾತುಗಳನ್ನಾಡಿದ್ದ ಪ್ರಧಾನಿ ಮೋದಿ ಅವರು ಪ್ರಸ್ತುತ ಯೋಜನೆಗಳನ್ನೇ ಜಾರಿ ಮಾಡಲು ಹಿಂದೇಟು ಹಾಕುತ್ತೀದ್ದೀರಾ ಎಂದು ಪ್ರಶ್ನೆ ಮಾಡಿದರು. ಕಾರ್ಪೋರೇಟ್ ಸ್ನೇಹಿ ಮನೋಭಾವದಿಂದ ರೈತರನ್ನು ಕಷ್ಟಕ್ಕೆ ನೂಕಲಾಗುತ್ತಿದೆ. ಇದನ್ನೆಲ್ಲ್ಲ ಸಹಿಸಿಕೊಂಡು ಕೂರುವ ಮನಸ್ಥಿತಿಯಿಂದ ರೈತಾಪಿ ವರ್ಗ ಹೊರಬರಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಚಳವಳಿಗಳು ಉಗ್ರರೂಪ ತಾಳಲಿವೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ನಾಗರಾಜು ಚೌಡಹಳ್ಳಿ, ದಡದಹಳ್ಳಿ ಕುಮಾರ್, ಮಂಜುನಾಥ್, ಅಂಕಹಳ್ಳಿ ಮಹೇಂದ್ರ, ಬಾಚಹಳ್ಳಿ ಮಂಜುನಾಥ್, ವಡೆರಪ್ಪ ವೀರನಪುರ, ಜಗದೀಶ್, ದೊರೆ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net