

ಗುಂಡ್ಲುಪೇಟೆ: ಲಿಖಿತ ಭರವಸೆ ನೀಡಿ ವರ್ಷವಾದರೂ ಕೆರೆಗಳನ್ನು ತುಂಬಿಸದಿರುವುದು ಅಧಿಕಾರಿಗಳ ನಿರ್ಲಕ್ಷ್ಯ ತೋರಿಸುತ್ತದೆ ಎಂದು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಹಸಿರು ಸೇನೆ ಹಾಗೂ ರೈತ ಸಂಘದ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಎದುರು ಆಯೋಜಿಸಿದ್ದ ಅನಿರ್ದಿಷ್ಟಾವಧಿ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದರು.
ಇದೇ ವಿಚಾರದಲ್ಲಿ ರೈತರು 2024ರಲ್ಲಿ ಧರಣಿ ನಡೆಸಿದ ವೇಳೆ ಕೆರೆ ತುಂಬಿಸುವ ಭರವಸೆ ನೀಡಿ ತಹಸೀಲ್ದಾರ್ ಹಾಗೂ ಇಂಜಿನಿಯರ್ ಸಹಿ ಹಾಕಿಕೊಟ್ಟ ಪತ್ರ ರೈತರ ಬಳಿ ಇದೆ. ಆದರೆ ವರ್ಷವಾದರೂ ಕೆರೆ ತುಂಬಿಸುವ ಕೆಲಸ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಳೆಯಾಶ್ರಿತ ಪ್ರದೇಶದಲ್ಲಿನ ರೈತರಿಗೆ ಬೇಕಾದ ಸೌಲಭ್ಯ ಒದಗಿಸಲು ಮೊದಲ ಪ್ರಾಮುಖ್ಯತೆ ಕೊಡಬೇಕು. ಪ್ರಸ್ತುತ ಅಂತರ್ಜಲ ಮಟ್ಟ ಕುಸಿದು ಕುಲಕಸುಬಿಗೆ ದೊಡ್ಡ ಹೊಡೆತ ಬಿದ್ದಿದೆ. ಕೆರೆ ತುಂಬಿಸಲು ಇನ್ನಷ್ಟು ವಿಳಂಬ ಮಾಡಿದೆ ರೈತರು ಸಾಲದ ಸುಳಿಗೆ ಸಿಲುಕುತ್ತಾರೆ. ಇದನ್ನ್ನು ಅರಿತ ರೈತ ಸಂಘ ಚಳವಳಿಗಿಳಿದಿರುವುದು ಸರಿಯಾದ ನಡೆ ಎಂದು ಹೇಳಿದರು.
ಈಗಾಗಲೇ ನಿಷಿದ್ಧ್ದವಾಗಿರೋ ಅಕ್ರಮ-ಸಕ್ರಮ ನಿಯಮದ ವಾಪಸಾತಿಗೆ ವಿಧಾನ ಸಭೆ ಕಲಾಪದಲ್ಲಿಯು ಆಗ್ರಹ ಮಾಡಿದ್ದೇವೆ. ಸರ್ಕಾರದ ಹೊಸ ನಿಯಮದ ಪ್ರಕಾರ ಹೊಸ ಟಿಸಿಗೆ ಅರ್ಜಿ ಕೊಟ್ಟರೆ ಇನ್ನುಳಿದ ಪರಿಕರಗಳ ಜವಾಬ್ದಾರಿ ರೈತರಿದ್ದಾಗಿರುತ್ತೆ ಆದ್ದರಿಂದ ಸರ್ಕಾರಕ್ಕೆ ನಾವು ಮನವಿ ಮಾಡಿದ್ದೇವೆ. ಈ ಹಿಂದೆ ಇದ್ದಂತಹ ನಿಯಮವನ್ನೇ ಜಾರಿ ಮಾಡಬೇಕು ಎಂದು ಒತ್ತಾಯಿಸಿದ್ದೇವೆ. ನಮ್ಮ ಬೇಡಿಕೆಗಳನ್ನ್ನು ಗಣನೆಗೆ ತೆಗೆದುಕೊಳ್ಳದೆ ಹೋದಲ್ಲಿ ನಮ್ಮ ಹೋರಾಟವನ್ನು ವಿಧಾನಸೌಧದ ಒಳಗೂ ಡೆಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.