

ಕೊಳ್ಳೇಗಾಲ: ರಾಜ್ಯ ಸರ್ಕಾರದ ಅಧಿಸೂಚನೆ ಉಲ್ಲಂಘಿಸಿ ನಗರಸಭೆ ಅನಧಿಕೃತ ಬಡಾವಣೆಗಳಿಗೆ ಆಸ್ತಿ ಮಾಲೀಕರಿಂದ ದುಪ್ಪಟ್ಟು ತೆರಿಗೆ ವಸೂಲಾತಿ ಮಾಡುತ್ತಿರುವುದನ್ನು ಖಂಡಿಸಿ ನಗರಸಭೆ ಸದಸ್ಯೆ ಜಿ.ಜಯಮರಿ ಹಾಗೂ ಸಾರ್ವಜನಿಕರು ಕೊಳ್ಳೇಗಾಲ ನಗರಸಭೆ ಕಚೇರಿ ಮುಂಭಾಗ ಬುಧವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
ನಗರಸಭೆ ಸದಸ್ಯೆ ಜಿ.ಜಯಮರಿ ಮಾತನಾಡಿ, ರಾಜ್ಯ ಸರ್ಕಾರ ಬಿ-ಖಾತೆ ವಿತರಣೆ ವಿಚಾರವಾಗಿ ಸುತ್ತೋಲೆ ಹೊರಡಿಸಿದೆ. 2023-24 ನೇ ಸಾಲಿನ ಹಿಂದಿನ 6 ವರ್ಷಕ್ಕೆ ಕಂದಾಯ ವಸೂಲಿ ಮಾಡಬೇಕು. 1 ವರ್ಷಕ್ಕೆ ಡಬಲ್ ಟ್ಯಾಕ್ಸ್ ಕಟ್ಟಿಸಿಕೊಳ್ಳುವಂತೆ ತಿಳಿಸಿದೆ. ಆದರೆ ನಗರಸಭೆ ಅಧಿಕಾರಿಗಳು ಇ-ಸ್ವತ್ತು ಆದ ವರ್ಷದಿಂದಲೂ ಡಬಲ್ ಟ್ಯಾಕ್ಸ್ ಕಟ್ಟಬೇಕು ಎಂದು ಹೇಳುತ್ತಾರೆ. ಈ ಅಧಿಕಾರವನ್ನು ನಗರಸಭೆಗೆ ಯಾರು ನೀಡಿದವರು? ಸರ್ಕಾರಕ್ಕಿಂತಲೂ ನಗರಸಭೆ ದೊಡ್ಡದೆ?, ಸರ್ಕಾರದ ಸುತ್ತೋಲೆಯಂತೆ ನಗರಸಭೆ ಕಂದಾಯ ವಸೂಲಾತಿ ಮಾಡಲಿ ಎಂದು ಆಗ್ರಹಿಸಿದರು.
ಈಗಾಗಲೇ ನೂರಾರು ಬಿ-ಖಾತೆ ಅರ್ಜಿ ಬಂದಿದೆ. ಕೆಲವರಿಗೆ ಮಾತ್ರ ಇ-ಸ್ವತ್ತು ನೀಡಲಾಗಿದೆ. ರಾತ್ರಿ 7 ಗಂಟೆ ಮೇಲೆ ಇ-ಸ್ವತ್ತು ಪ್ರಿಂಟ್ ತೆಗೆಯುತ್ತಿದ್ದಾರೆ. ಕೆಲಸದ ಅವಧಿಯಲ್ಲಿ ಜನ ಸಾಮಾನ್ಯರನ್ನು ಸುತ್ತಿಸುವುದು. ಕರ್ತವ್ಯದ ಸಮಯದ ಮುಗಿದ ಬಳಿಕ ಬೇಕಾದವರಿಗೆ ಇ-ಸ್ವತ್ತು ನೀಡಿದ್ದಾರೆ. ಈ ಬಗ್ಗೆ ತನಿಖೆ ಆಗಬೇಕು. ನಮ್ಮ ಪ್ರಶ್ನೆಗಳಿಗೆ ಖುದ್ದು ಜಿಲ್ಲಾಧಿಕಾರಿ ಆಗಮಿಸಿ ಉತ್ತರ ನೀಡಬೇಕು. ಅಲ್ಲಿಯವರೆಗೂ ಹೋರಾಟ ಮುಂದುವರಿಯುವುದಾಗಿ ಎಚ್ಚರಿಸಿದರು.
ರೈತ ಮುಖಂಡ ದಶರಥ್ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿರುವ ಅಧಿಕೃತ, ಅನಧಿಕೃತ ಬಡಾವಣೆ ಯಾವುದು ಎಂಬ ಬೌಂಡರಿ ಗುರುತಿಸಿಲ್ಲ. ಬಿ-ಖಾತೆ ವಿತರಣೆಗೆ ಸರ್ಕಾರ ನಿಗದಿ ಪಡಿಸಿರುವ ಕಂದಾಯ ವಸೂಲಾತಿ ನಿಯಮ ಉಲ್ಲಂಘನೆ ಆಗುತ್ತಿದೆ ಎಂದರು. ಪ್ರತಿಭಟನೆಗೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಾಥ್ ನೀಡಿದರು.
ಧರಣಿಯಲ್ಲಿ ಭಾರತೀಯ ಮಾನವ ಹಕ್ಕುಗಳ ಜಾಗೃತಿ ಸೇನೆಯ ರಾಜ್ಯ ಜಂಟಿ ಕಾರ್ಯದರ್ಶಿ ಮಹೇಶ್, ಛಲವಾದಿ ಮಹಾಸಭೆಯ ಚಾಮರಾಜು, ಲಿಂಗರಾಜು, ಪುಟ್ಟಸ್ವಾಮಿ, ನಾಗರಾಜು, ಸುಮನ್, ಕೆಆರ್‌ಎಸ್ ಪಕ್ಷದ ಮಹೇಶ್ ಕಂದಹಳ್ಳಿ, ಜಿಲ್ಲಾಧ್ಯಕ್ಷ ಗಿರೀಶ್, ಕುಮಾರ್, ಶಿವಪ್ರಕಾಶ್, ಯಳಂದೂರು ತಾಲೂಕು ಅಧ್ಯಕ್ಷ ರಂಗ ರಾಜು ಮತ್ತಿತರಿದ್ದರು.