

ತಿ.ನರಸೀಪುರ: ತೋಟಗಾರಿಕೆ ಇಲಾಖೆ ನೌಕರನೊಬ್ಬನನ್ನು ಕೆಲಸದಿಂದ ತೆಗೆದು ಹಾಕಿ, 11 ತಿಂಗಳ ಬಾಕಿ ವೇತನವನ್ನು ನೀಡಿಲ್ಲ ಎಂದು ಆರೋಪಿಸಿ ಪಟ್ಟಣದಲ್ಲಿ ಮಂಗಳವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ)ಯ ಕಾರ್ಯಕರ್ತರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ತೋಟಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ಮುಂಭಾಗ ಜಮಾವಣೆಗೊಂಡಿದ್ದ ಕಾರ್ಯಕರ್ತರು ಹಾಗೂ ಮುಖಂಡರು, ಪಟ್ಟಣದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ 11 ತಿಂಗಳ ಕಾಲ ನೌಕರರಾಗಿ ದುಡಿದ ತಾಲೂಕಿನ ದೊಡ್ಡೇಬಾಗಿಲು ಗ್ರಾಮದ ಡಿ.ಬಿ.ಪ್ರೇಮ್ ಕುಮಾರ್ ಅವರನ್ನು ಕೆಲಸದಿಂದ ತೆಗೆದು, ವೇತನವನ್ನು ನೀಡಿಲ್ಲ ಎಂದು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿಸಿದರು.
ಪ್ರತಿಭಟನೆ ನೇತೃತ್ವವನ್ನು ವಹಿಸಿದ್ದ ಸಮಿತಿಯ ರಾಜ್ಯ ವಿಭಾಗೀಯ ಸಂಚಾಲಕ ಡಾ. ಆಲಗೂಡು ಎಸ್.ಚಂದ್ರಶೇಖರ್ ಮಾತನಾಡಿ, ತೋಟಗಾರಿಕೆ ಇಲಾಖೆಯಲ್ಲಿ ಉದ್ಯೋಗವನ್ನು ನೆಚ್ಚಿಕೊಂಡು ದುಡಿಯುತ್ತಿದ್ದ ಡಿ.ಬಿ.ಪ್ರೇಮ್‌ಕುಮಾರ್ ಅವರನ್ನು ದಿಢೀರ್ ಕೆಲಸದಿಂದ ತೆಗೆದ ಅಧಿಕಾರಿಗಳು ವೇತನವನ್ನು ಕೊಡದೆ ದುರ್ಬಲ ವರ್ಗದ ನೌಕರನ ಬದುಕಿನೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ. ಜಿಲ್ಲಾ ಜಂಟಿ ನಿರ್ದೇಶಕರು ಸ್ಥಳಕ್ಕಾಗಮಿಸಿ ಅನ್ಯಾಯಕ್ಕೊಳಗಾದ ನೌಕರನಿಗೆ ನ್ಯಾಯ ಒದಗಿಸುವವರೆಗೂ ಧರಣಿ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಧರಣಿಯಲ್ಲಿ ಕೆಂಪಯ್ಯನಹುಂಡಿ ಆರ್.ರಾಜು, ಕನ್ನಾಯಕನಹಳ್ಳಿ ಮರಿಸ್ವಾಮಿ, ಕೊಳತ್ತೂರು ಪ್ರಭಾಕರ್, ಮನೋಜ್‌ಕುಮಾರ್, ಕುಮಾರ ನಿಲಸೋಗೆ, ರಾಚಪ್ಪ ತೊಟ್ಟವಾಡಿ, ಎಸ್.ಕೆ .ಶಿವಕುಮಾರ್, ಗವಿಸಿದ್ದಯ್ಯ, ಗಿರೀಶ್, ಪ್ರಸನ್ನ, ಪರಶುರಾಮ, ಚಂದ್ರಪ್ಪ, ಮಲ್ಲೇಶ ಹೆಮ್ಮಿಗೆ, ರವಿಕಾಂತ್, ಜಯಕುಮಾರ್, ಮಹದೇವ, ಡಿ.ಪ್ರೇಮ್ ಕುಮಾರ್, ಶಿವಕುಮಾರ್, ಸ್ವಾಮಿ, ಇತರರು ಇದ್ದರು.