

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ತಾಲೂಕಿನ ಕಸಬಾ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ ಮಾಡಿಕೊಳ್ಳುವ ಭೂಮಿಗೆ ವೈಜ್ಞಾನಿಕ ಬೆಲೆ ನಿಗದಿಗೆ ಒತ್ತಾಯಿಸಿ ಕಸಬಾ ಹೋಬಳಿ ಕೊನಘಟ್ಟದ ಕಾಮನಬಂಡೆ ಬಳಿ ರೈತರು ಆರಂಭಿಸಿರುವ ಅನಿರ್ದಿಷ್ಠಾವಧಿ ಧರಣಿ 9ನೇ ದಿನ ಪೂರೈಸಿತು.
ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ ಮಾತನಾಡಿ, ಕೃಷಿ ಭೂಮಿ ಸ್ವಾಧೀನ ಮಾಡಿಕೊಳ್ಳುವಾಗ ಕೇಂದ್ರ ಸರ್ಕಾರ ಜಾರಿಗೆ ತಂದಿರುವ 2013ರ ಭೂಸ್ವಾಧೀನ ನಿಯಮ ಪಾಲಿಸಬೇಕು. ಆದರೆ ಅಧಿಕಾರಿಗಳು ಕಾನೂನು ಬದಿಗೊತ್ತಿ ಅವೈಜ್ಞಾನಿಕವಾಗಿ ಬಲವಂತದ ಭೂಸ್ವಾಧೀನ ಮಾಡಿಕೊಳ್ಳಲು ಮುಂದಾಗಿರುವುದು ಖಂಡನೀಯ ಎಂದರು.
ರೈತರ ಹಕ್ಕೊತ್ತಾಯವಾದ ಹೆಚ್ಚು ದರ ನಿಗದಿ ಮಾಡದ ಹೊರತು ಭೂಮಿ ಕೊಡುವುದಿಲ್ಲ. ತಾಲೂಕಿನ ಅಭಿವೃದ್ಧಿಗೆ ಕೈಗಾರಿಕೆಗಳ ಸ್ಥಾಪನೆ ಮುಖ್ಯ. ಆದರೆ, ರೈತರ ಭೂಮಿಗೆ ಸರ್ಕಾರ ರೂಪಿಸಿರುವ ಕಾನೂನುಗಳನ್ನೇ ಗಾಳಿಗೆ ತೂರಿರುವ ಅಧಿಕಾರಿಗಳು, ವೈಜ್ಞಾನಿಕ ಬೆಲೆ ನೀಡದೆ, ಇಷ್ಟಬಂದ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ರೈತರ ಕೃಷಿ ಭೂಮಿಗೆ ಸೂಕ್ತ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಕೆಐಎಡಿಬಿ ಅಧಿಕಾರಿಗಳಿಗೆ ಈ ಸಂಬಂಧ ಜ.26ರೊಳಗೆ ಸೂಕ್ತ ನಿರ್ಧಾರ ಕೈಗೊಳ್ಳಲು ಗಡುವು ನೀಡಲಾಗಿದೆ. ತಪ್ಪಿದಲ್ಲಿ ಹೋರಾಟದ ಸ್ವರೂಪ ಬದಲಾಗಲಿದೆ ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಶ್ರೀನಿವಾಸ್, ಮನವಿಯನ್ನು ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪ, ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಅವರ ಗಮನಕ್ಕೆ ತರಲಾಗುವುದು. ಉನ್ನತ ಮಟ್ಟದಲ್ಲಿ ಸಭೆ ಮಾಡಿ, ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಗ್ರಾಪಂ ಸದಸ್ಯರಾದ ಸೋಮಶೇಖರ್, ಭಾಗ್ಯಮ್ಮ ಸುಬ್ರಮಣಿ, ಸಿಮೆಂಟ್ ಮಂಜುನಾಥ್, ಹಮಾಮ್ ಪ್ರಕಾಶ್, ಭಾಗ್ಯಮ್ಮ, ಸಿದ್ದಲಿಂಗಯ್ಯ, ನಿವೃತ್ತ ಶಿಕ್ಷಕ ಸಿ.ಕೃಷ್ಣಪ್ಪ, ಮುಖಂಡರಾದ, ಶಿವಾಜಿ, ನಾರಾಯಣಸ್ವಾಮಿ, ನರಸಿಂಹಮೂರ್ತಿ, ಮೋಹನ್ ಬಾಬು, ರಮೇಶ್, ಮುನಿರಾಜು, ಜೋಗಿ ಆನಂದ್ ಮತ್ತಿತರರು ಇದ್ದರು.