ಗ್ರಾಮ ಲೆಕ್ಕಿಗರಿಂದ ಅನಿರ್ಧಿಷ್ಟಾವಧಿ ಧರಣಿ ಆರಂಭ

26 ckm 2
ಚಿಕ್ಕಮಗಳೂರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದ ಗ್ರಾಮ ಆಡಳಿತಾಧಿಕಾರಿಗಳು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು. ನಾಗೇಶ್, ಚೇತನ್, ತೇಜೇಶ್ವರ್, ಈರಮ್ಮ, ಪ್ರದೀಪ್, ಹರ್ಷವರ್ಧನ್, ಯಮುನಾ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿಯನ್ನು ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗೂ ನಿಗಧಿಪಡಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲೆಯಾದ್ಯಂತ ಗ್ರಾಮ ಆಡಳಿತ ಅಧಿಕಾರಿಗಳು ಗುರುವಾರದಿಂದ ತಾಲೂಕು ಕಚೇರಿ ಎದುರು ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.

ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ಮುಷ್ಕರ ಆರಂಭಿಸಿದ್ದು, ಈ ಪ್ರತಿಭಟನೆ ಶುಕ್ರವಾರವೂ ಮುಂದುವರೆಯಲಿದೆ. ಗ್ರಾಮ ಆಡಳಿತ ಅಧಿಕಾರಿಗಳು ಸಂಯೋಜನೆ, ಇ- ಆಫೀಸ್, ಆಧಾರ್ ಸೀಡ್, ಲ್ಯಾಂಡ್ ಬೀಟ್, ಬಗರ್ ಹುಕ್ಕುಂ, ನಮೂನೆ ೧-೫ರ ವೆಬ್ ಅಪ್ಲಿಕೇಷನ್, ಪೌತಿ ಆಂದೋಲನ ಆಪ್ ಸೇರಿದಂತೆ ಸುಮಾರು ೨೧ ತಾಂತ್ರಿಕ ಸೇವೆಗಳು ಹಾಗೂ ಸಿ- ವೃಂದದ ನೌಕರರ ಹತ್ತು ಪಟ್ಟು ಕೆಲಸಗಳ ಜವಬ್ದಾರಿಯನ್ನು ವಹಿಸುತ್ತಿದ್ದಾರೆ. ಹೀಗಾಗಿ ತಮಗೂ ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿಯನ್ನು ನೀಡಬೇಕು ಎಂದು ಆಗ್ರಹಿಸಿದರು.
ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತವಾದ ಕಚೇರಿ, ಉತ್ತಮ ಗುಣಮಟ್ಟದ ಟೇಬಲ್ ಮತ್ತು ಕುರ್ಚಿ ಮತ್ತು ಆಲ್ಮೆರಾ, ಗುಣಮಟ್ಟದ ಮೊಬೈಲ್ ಫೋನ್, ಗೂಗಲ್ ಕ್ರೋಮ್ ಬುಕ್, ಲ್ಯಾಪ್ ಟಾಪ್, ಪ್ರಿಂಟರ್ ಸ್ಕಾö್ಯನರ್ ನೀಡಬೇಕು. ಮೊಬೈಲ್ ತಂತ್ರಾAಶಗಳ ಕೆಲಸದ ವಿಚಾರವಾಗಿ ಇದುವರೆಗೂ ಆಗಿರುವ ಎಲ್ಲ ಅಮಾನತ್ತುಗಳನ್ನು ತಕ್ಷಣವೇ ರದ್ದುಪಡಿಸಬೇಕು, ಕೆಸಿಎಸ್‌ಆರ್ ನಿಯಮಾವಳಿಗಳಂತೆ ಸರ್ಕಾರಿ ರಜಾ ದಿನಗಳಲ್ಲಿ ಕರ್ತವ್ಯಕ್ಕೆ ಮೆಮೋ ಹಾಕಬಾರದು. ಮೆಮೋ ಹಾಕುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಆದೇಶ ಹೊರಡಿಸಬೇಕು. ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರು ಹಾಗೂ ರಾಜಸ್ವ ನಿರೀಕ್ಷಕರ ಹುದ್ದೆಗಳಿಗೆ ತಕ್ಷಣವೇ ಪದೋನ್ನತಿ ನೀಡಬೇಕು ಎಂದು ಒತ್ತಾಯಿಸಿದರು.
ಕೆಲಸದ ಅವಧಿಯ ಮುನ್ನ ಹಾಗೂ ಕೆಲಸದ ಮುಕ್ತಾಯದ ನಂತರ ನಡೆಸಲಾಗುವ ಎಲ್ಲ ಬಗೆಯ ವರ್ಚುವಲ್ ಸಭೆಗಳನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಆಹಾರ ಇಲಾಖೆಯ ಕೆಲಸಗಳನ್ನು ಕಂದಾಯ ಇಲಾಖೆಗೆ ನಿರ್ವಹಿಸಲು ಆದೇಶಿಸುತ್ತಿರುವುದರಿಂದ ಈ ಹಿಂದಿನAತೆ ಆಹಾರ ಇಲಾಖೆಯ ಆಹಾರ ನಿರೀಕ್ಷಕರ ಹುದ್ದೆಗೆ ಪದೋನ್ನತಿ ನೀಡಬೇಕು. ಕಂದಾಯ ಇಲಾಖೆಯ ೩ ವರ್ಷಗಳ ಸೇವೆಯನ್ನು ಪರಿಗಣಿಸಿ ಅಂತರ್ ಜಿಲ್ಲಾ ವರ್ಗಾವಣೆಗಾಗಿ ಕಂದಾಯ ಇಲಾಖೆಯಲ್ಲಿ ಹೊಸ ಮಾರ್ಗಸೂಚಿಯನ್ನು ರಚಿಸಬೇಕು ಎಂದು ಮನವಿ ಮಾಡಿದರು.
ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ಇತರೆ ಎಲ್ಲ ರೀತಿಯ ಕೆಲಸವನ್ನು ನಿರ್ವಹಿಸುತ್ತಿರುವ ತಮಗೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯಲ್ಲಿರುವಂತೆ ೩ ಸಾವಿರ ರು. ಆಪತ್ತಿನ ಭತ್ಯೆ ನೀಡಬೇಕು. ಪ್ರಯಾಣದ ಭತ್ಯೆಯನ್ನು ೫೦೦ ರು.ಗಳಿಂದ ೩ ಸಾವಿರಕ್ಕೆ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಮಾಜಿ ಜಿಲ್ಲಾಧ್ಯಕ್ಷ ನಾಗೇಶ್, ತಾಲೂಕು ಅಧ್ಯಕ್ಷ ಚೇತನ್, ಪ್ರಧಾನ ಕಾರ್ಯದರ್ಶಿ ತೇಜೇಶ್ವರ್, ಉಪಾಧ್ಯಕ್ಷೆ ಈರಮ್ಮ, ಹರ್ಷವರ್ಧನ್, ಪ್ರದೀಪ್, ಯಮುನಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net