

ಹಿರೇಕೆರೂರ: ಸಾಲಬಾಧೆಯಿಂದ ರೈತರೊಬ್ಬರು ವಿಷ ಸೇವಿಸಿ ಮೃತಪಟ್ಟ ಘಟನೆ ತಾಲೂಕಿನ ಹೊಲಬಿಕೊಂಡ ಗ್ರಾಮದಲ್ಲಿ ಭಾನುವಾರ ನಡೆದಿದೆ.
ನಾಗಪ್ಪ ನಿಂಗಪ್ಪ ಪೂಜಾರ (62) ಮೃತ ರೈತ.
ಇವರು ಕೃಷಿಗಾಗಿ ಬ್ಯಾಂಕ್‌ನಲ್ಲಿ 3 ಲಕ್ಷ ರೂ. ಸಾಲ ತೆಗೆದುಕೊಂಡಿದ್ದರು. ಆದರೆ, ಮಳೆ ಕೊರತೆಯಿಂದ ಬೆಳೆ ಹಾಳಾಗಿ ಹೋಗಿತ್ತು. ಇದರಿಂದ ಮನನೊಂದು ಮನೆ ಹಿಂಭಾಗದ ಜಮೀನಿನಲ್ಲಿ ವಿಷ ಸೇವಿಸಿದ್ದಾರೆ. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.