ಇಂಡುವಾಳು ಶಾಲೆಗೆ ಮೂಲ ಸೌಲಭ್ಯ ಕಲ್ಪಿಸಿ: ಎಸ್‌ಡಿಎಂಸಿ ಸದಸ್ಯರು, ವಿದ್ಯಾರ್ಥಿಗಳು, ಗ್ರಾಮಸ್ಥರ ಪ್ರತಿಭಟನೆ

03_07_Mdy_05(Indvalu Protest)
Published on

ಮಂಡ್ಯ: ತಾಲೂಕಿನ ಇಂಡುವಾಳು ಗ್ರಾಮದ ಸರ್ಕಾರಿ ಶಾಲೆಗೆ ಮೂಲ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಸೋಮವಾರ ಎಸ್‌ಡಿಎಂಸಿ ಸದಸ್ಯರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಶಾಲಾ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರು-ಮೈಸೂರು ಹೆದ್ದಾರಿ ಬದಿಯಲ್ಲಿರುವ ಸರ್ಕಾರಿ ಶಾಲೆಗೆ ಸೇರಿದ ಕಾಂಪೌಂಡ್, ಶೌಚಗೃಹ ಹಾಗೂ ಇತರೆ ಜಾಗವನ್ನು ಹೆದ್ದಾರಿಗಾಗಿ ಪ್ರಾಧಿಕಾರದವರು ವಶಪಡಿಸಿಕೊಂಡಿದ್ದಾರೆ. ಅಂತೆಯೇ 8 ಲಕ್ಷ ರೂ ಪರಿಹಾರ ನೀಡಿದ್ದಾರೆ. ಈ ಹಣ ಶಿಕ್ಷಣ ಇಲಾಖೆಯಲ್ಲಿ ಠೇವಣಿಯಾಗಿದೆ. ಹೆದ್ದಾರಿ ನಿರ್ಮಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದ್ದರೂ, ಈವರೆವಿಗೂ ಪರಿಹಾರದ ಹಣದಲ್ಲಿ ಶಾಲಾ ಆವರಣದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಕಾಂಪೌಂಡ್ ನಿರ್ಮಾಣ, ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ, ಆಟದ ಮೈದಾನ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸೌಲಭ್ಯವಿಲ್ಲದ ಪರಿಣಾಮ ಮಕ್ಕಳು ಮತ್ತು ಶಾಲಾ ಸಿಬ್ಬಂದಿ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಕಾಂಪೌಂಡ್ ನಿರ್ಮಾಣವಾಗದ ಕಾರಣ ಶಾಲಾ ಆವರಣದಲ್ಲಿ ಕೆಲ ಕಿಡಿಗೇಡಿಗಳು ಇಸ್ಪೀಟ್, ಧೂಮಪಾನ, ಮದ್ಯಪಾನ ಮಾಡುತ್ತಾರೆ. ಆವರಣದಲ್ಲಿ ಮದ್ಯದ ಬಾಟಲಿಗಳನ್ನು ಬಿಸಾಡಿ ದಾಂಧಲೆ ನಡೆಸಿರುತ್ತಾರೆ ಎಂದು ಕಿಡಿಕಾರಿದರು.

ಪ್ರತಿಭಟನೆಯ ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಬಿಇಒ ಉದಯಕುಮಾರ್, ಹೆದ್ದಾರಿ ಪ್ರಾಧಿಕಾರದಿಂದ ಪರಿಹಾರ ನೀಡಿದ್ದಾರೆ. ನಿಯಮದ ಪ್ರಕಾರ ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸರ್ಕಾರದ ಆದೇಶದ ನಂತರ ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಕೊಠಡಿಗಳ ನಿರ್ಮಾಣ, ಶೌಚಾಲಯ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಇಂಜಿನಿಯರ್ ಜತೆಗೂ ಮಾತನಾಡಿದ್ದು, ಎರಡು ವಾರದಲ್ಲಿ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ ಮಾಡಿಕೊಡಲಾಗುವುದು ಎಂದು ಹೇಳಿದರು. ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಹೊನ್ನಪ್ಪ, ಸದಸ್ಯರಾದ ಸೋಮಶೇಖರ್, ರಘು, ಚೈತನ್ಯ, ಸವಿತಾ, ಅಂಜಲಿ, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಸಿದ್ದೇಗೌಡ, ಬಸವರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net