

ಇಂಡಿ: ಬಣಜಿಗ ಸಮಾಜ ಸ್ವಾಭಿಮಾನಿಯಾಗಿದ್ದು ಎಲ್ಲ ಸಮುದಾಯಕ್ಕೆ ಸಹಕಾರಿಯಾಗಿದೆ. ಪಟ್ಟಣದಲ್ಲಿ ಬಣಜಿಗ ಸಮಾಜದವರು ಕಟ್ಟುತ್ತಿರುವ ಮಂಗಲ ಕಾರ್ಯಾಲಯಕ್ಕೆ ಕೈಲಾದಷ್ಟು ಅನುದಾನ ನೀಡಲಾಗುವುದು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಭರವಸೆ ನೀಡಿದರು.
ತಾಲೂಕು ಬಣಜಿಗ ಸಮಾಜ ಬಾಂಧವರು ಪಟ್ಟಣದ ಬಸವರಾಜೇಂದ್ರ ಸಭಾಭವನದಲ್ಲಿ ಭಾನುವಾರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ರಾಜ್ಯದ ಜನತೆಗೆ ಅಂದಾಜು 58 ಸಾವಿರ ಕೋಟಿ ರೂ. ವೆಚ್ಚದ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ. ಅವುಗಳನ್ನು ಸಂಪೂರ್ಣವಾಗಿ ಈಡೇರಿಸುವಲ್ಲಿ ಈಗಾಗಲೇ ಕಾರ್ಯ ಪ್ರವೃತ್ತವಾಗಿದೆ. ಅವುಗಳ ಈಡೇರಿಕೆಯ ನಂತರ ಕ್ಷೇತ್ರದ ಅಭಿವೃದ್ಧಿ ಕಡೆಗೆ ಹೆಚ್ಚಿನ ಅನುದಾನ ಬಿಡುಗಡೆಯಾಗುತ್ತದೆ. ಅಲ್ಲಿಯವರೆಗೆ ಜನತೆ ತಾಳ್ಮೆಯಿಂದ ಇರಬೇಕು ಎಂದು ಮನವಿ ಮಾಡಿದರು.
ಬಣಜಿಗ ಸಮಾಜ ಮಠ- ಮಂದಿರಗಳಿಗೆ ಸಹಾಯ ಹಸ್ತ ಚಾಚುವ ಸಮಾಜವಾಗಿದೆ. ಸ್ವಾಮಿ ವಿವೇಕಾನಂದರ ನಂತರ ವಿಜಯಪುರದ ಸಿದ್ಧೇಶ್ವರ ಶ್ರೀಗಳು ಮಾನವ ಕುಲಕೋಟಿ ಉದ್ಧಾರ ಮಾಡಲು ಜಗತ್ತಿಗೆ ಬಂದಿದ್ದ ಅವತಾರ ಪುರುಷರಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಮಾಜಿ ಶಾಸಕ ದಿ.ಮಲ್ಲಪ್ಪ ಸುರಪೂರ ಅವರ ಹೆಸರಿನಲ್ಲಿ ಟ್ರಸ್ಟ್ ನಿರ್ಮಿಸಿ, ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡಲು ಸಮಾಜ ಬಾಂಧವರು ಮುಂದಾದರೆ ಅದಕ್ಕೆ ಎಲ್ಲ ರೀತಿಯ ನೆರವು ನೀಡುವದಾಗಿ ಭರವಸೆ ನೀಡಿದರು.
ಸಮಾಜದ ಹಿರಿಯರಾದ ಬಿ.ಎಂ.ಕೋರೆ, ತಾಲೂಕು ಬಣಜಿಗ ಸಮಾಜದ ಮಾಜಿ ಅಧ್ಯಕ್ಷ ವಿಜಯಕುಮಾರ ಧನಶ್ರೀ, ಸಂಗಣ್ಣ ಈರಾಭಟಿ ಮಾತನಾಡಿದರು.
ಸಮಾಜ ಬಾಂಧವರ ವತಿಯಿಂದ ಶಾಸಕರಿಗೆ ಬೆಳ್ಳಿ ತಕ್ಕಡಿ ಉಡುಗೋರೆಯಾಗಿ ನೀಡಿ ಸನ್ಮಾನಿಸಲಾಯಿತು. ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಬಣಜಿಗ ಸಮಾಜದ ಮುಖಂಡರು ಶಾಸಕರಿಗೆ ಸನ್ಮಾನಿಸಿದರು.
ನಿವೃತ್ತ ಪ್ರಾಚಾರ್ಯ ಐ.ಬಿ.ಸುರಪೂರ, ಸೋಮಶೇಖರ ಸುರಪೂರ, ಶಾಂತಪ್ಪ ಕಕ್ಕಳಮೇಲಿ ಇದ್ದರು.
ಇಂಡಿ ತಾಲೂಕು ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚನ್ನುಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಶಿವಬಸವರಾಜೇಂದ್ರ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶಿಕ್ಷಕ ಜಿ.ಜಿ.ಬರಡೋಲ ನಿರೂಪಿಸಿದರು.