ಇಂಡಿ ಹೆಸ್ಕಾಂ ಕಚೇರಿಗೆ ಬೀಗ ಜಡಿದು ಬೃಹತ್ ಪ್ರತಿಭಟನೆ

Indi, HESCOM office, protest, seven hours of electricity, farmers,
ಇಂಡಿ ಪಟ್ಟಣದ ಹೆಸ್ಕಾಂ ಕಚೇರಿ ಮುಂಭಾಗ ಕಾರ್ಯಪಾಲಕ ಇಂಜಿನಿಯರ್ ಎಸ್.ಎ.ಬಿರಾದಾರ ಅವರಿಗೆ ರೈತರು ಮನವಿ ಸಲ್ಲಿಸಿದರು. ಕಾಸುಗೌಡ ಬಿರಾದಾರ, ಬಿ.ಡಿ.ಪಾಟೀಲ, ಸಿದ್ದಲಿಂಗ ಹಂಜಗಿ ಇತರರಿದ್ದರು.
Published on

ಇಂಡಿ: ತಾಲೂಕಿನ ರೈತರಿಗೆ ಏಳು ಗಂಟೆ ವಿದ್ಯುತ್ ನಿರಂತರ ಪೂರೈಸುವಂತೆ ಆಗ್ರಹಿಸಿ ಶುಕ್ರವಾರ ಪಟ್ಟಣದ ಹೆಸ್ಕಾಂ ಕಚೇರಿಗೆ ಬೀಗ ಜಡಿದು ಬೃಹತ್ ಪ್ರತಿಭಟನೆ ಮಾಡಲಾಯಿತು.

ಪ್ರತಿಭಟನಾಕಾರರ ಮನವೊಲಿಸಲು ಹೆಸ್ಕಾಂ ಅಧಿಕಾರಿಗಳು ಸಾಕಷ್ಟು ಕಸರತ್ತು ನಡೆಸಿದರೂ ಹೆಸ್ಕಾಂ ಎಂ.ಡಿ ಸ್ಥಳಕ್ಕೆ ಬಂದು ಆಶ್ವಾಸನೆ ನೀಡುವ ಹೊರತು ಪ್ರತಿಭಟನೆ ಹಿಂದೆ ಪಡೆಯುವುದಿಲ್ಲ ಎಂದು ರೈತರು ಪಟ್ಟು ಹಿಡಿದರು.

ಜಿಲ್ಲಾ ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ, ಈ ಮೊದಲು ರೈತರಿಗೆ ಹಗಲು ಹೊತ್ತಿನಲ್ಲಿ ನಿರಂತರ ಏಳು ಗಂಟೆ ವಿದ್ಯುತ್ ನೀಡಲಾಗುತ್ತಿತ್ತು. ಕಳೆದ ಒಂದು ತಿಂಗಳಿಂದ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ. ಹೀಗಾಗಿ ಮೋಟಾರು ಸುಟ್ಟು ರೈತರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದರು.

ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ ಮಾತನಾಡಿ, ಸದ್ಯ ಬೆಳಗ್ಗೆ ಮೂರು ಗಂಟೆ ವಿದ್ಯುತ್ ನೀಡುವುದರಲ್ಲೇ ಒಂದೂವರೆ ಗಂಟೆ ಮಧ್ಯೆ ಕಡಿತ ಮಾಡುತ್ತಾರೆ. ನಂತರ ರಾತ್ರಿ 10 ರಿಂದ 2 ರವರೆಗೆ ಇಲ್ಲವೆ ರಾತ್ರಿ 2 ರಿಂದ ಬೆಳಗಿನ 6 ರವರೆಗೆ ವಿದ್ಯುತ್ ನೀಡುತ್ತಾರೆ. ಅದರಲ್ಲೂ ಒಂದೂವರೆ ಗಂಟೆ ಕಡಿತ ಮಾಡುತ್ತಾರೆ ಎಂದು ದೂರಿದರು.

ಪ್ರೊ.ಸಿದ್ದಲಿಂಗ ಹಂಜಗಿ ಮಾತನಾಡಿ, ವಿದ್ಯುತ್ ಕಡಿತ ಕುರಿತು ಅಧಿಕಾರಿಗಳಿಗೆ ಫೋನ್ ಮಾಡಿದರೆ ಸ್ಪಂದಿಸುವುದಿಲ್ಲ. ಟಿಸಿ ಸುಟ್ಟರೆ 24 ಗಂಟೆಯಲ್ಲಿ ನೀಡಬೇಕು ಎಂಬ ಆದೇಶವಿದೆ. ಆದರೆ ರೈತರಿಗೆ ಟಿಸಿ ಕೊಡುವುದೇ ಇಲ್ಲ. ರಾತ್ರಿ ನೀರು ಬಿಡಲು ಹೋಗಿ ರೈತ ಸತ್ತಿದ್ದಾನೆ. ಇಂತಹ ಪರಿಸ್ಥಿತಿ ಮರುಕಳಿಸದಂತೆ ನಿರಂತರವಾಗಿ ಹಗಲು ಹೊತ್ತು ವಿದ್ಯುತ್ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದರು.

ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ, ದೇವೇಂದ್ರ ಕುಂಬಾರ, ಸೋಮು ನಿಂಬರಗಿಮಠ, ಶ್ರೀಶೈಲಗೌಡ ಬಿರಾದಾರ, ಅಪ್ಪು ಗುಡ್ಲ, ಹಣಮಂತ ಗುಡ್ಲ, ವೈ.ಎ.ಪಾಟೀಲ, ಶರತ ಪಾಟೀಲ ಮಾತನಾಡಿದರು.

ಸ್ಥಳಕ್ಕೆ ಆಗಮಿಸಿದ ಕಾರ್ಯಪಾಲಕ ಇಂಜಿನಿಯರ್ ಎಸ್.ಎ.ಬಿರಾದಾರ ಮತ್ತು ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಎಸ್.ಆರ್.ಮೆಂಡೆಗಾರ ಮಾತನಾಡಿ, ವಿದ್ಯುತ್ ಉತ್ಪಾದನೆ ಕುಂಠಿತಗೊಂಡಿರುವ ಕಾರಣ ಸದ್ಯಕ್ಕೆ ಹಗಲು ಹೊತ್ತಿನಲ್ಲಿ ಸತತವಾಗಿ ಏಳು ಗಂಟೆ ವಿದ್ಯುತ್ ಪೂರೈಸಲು ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ಸುಧಾರಣೆ ನಂತರ ಮೊದಲಿನಂತೆ ಏಳು ಗಂಟೆ ವಿದ್ಯುತ್ ಪೂರೈಸಲು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ ನಂತರ ರೈತರು ಕಚೇರಿಯ ಬೀಗ ತೆರೆದು ಸಿಬ್ಬಂದಿ ಒಳಗೆ ಹೋಗಲು ಅನುವು ಮಾಡಿಕೊಟ್ಟರು.

ಮಹಿಬೂಬ ಬೇನೂರ, ಅಯೂಬ ನಾಟಿಕಾರ, ಖಾಜು ಮುಲ್ಲಾ, ಯಲ್ಲಪ್ಪ ಹದರಿ, ಸಿದ್ದು ಡಂಗಾ, ಶಾಂತು ಕಂಬಾರ, ಸಂಜು ದಶವಂತ ಹಾಗೂ ವಿವಿಧ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net