

ಶಿಕಾರಿಪುರ: ಯಾವುದೇ ರಾಷ್ಟ್ರದ ಅಂತಃಶಕ್ತಿ ಮತ್ತು ಅಂತಃಸತ್ವದ ಆಸ್ತಿ ಎಂದರೆ ಯುವ ಸಮೂಹ. ಯುವಶಕ್ತಿಯೇ ರಾಷ್ಟ್ರದ ಶಕ್ತಿ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ಗುರುವಾರ ಆಯೋಜಿಸಿದ್ದ ಕುಮದ್ವತಿ ಪ್ರಥಮ ದರ್ಜೆ ಕಾಲೇಜು ಹಾಗೂ ಕುಮದ್ವತಿ ವಾಣಿಜ್ಯ ಸ್ನಾತಕೋತ್ತರ ಕೇಂದ್ರದ ವಾರ್ಷಿಕೋತ್ಸವ, ಪದವಿ ಪ್ರದಾನ ಮತ್ತು ಪಾರಂಪರಿಕ ದಿನಾಚರಣೆಯಲ್ಲಿ ಮಾತನಾಡಿ, ರಾಷ್ಟ್ರ ನಿರ್ಮಾಣದಲ್ಲಿ ಯುವಜನತೆಯ ಪಾತ್ರ ಹಿರಿದಾಗಿದ್ದು ಯುವ ಜನಾಂಗ ಎಲ್ಲ ಕ್ಷೇತ್ರಗಳಲ್ಲಿಯೂ ಹೆಚ್ಚಿನ ಸಾಧನೆಯನ್ನು ತೋರುತ್ತಿದೆ ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ಎಂ.ಟಿ.ಮಂಜುನಾಥ ಸ್ವಾಮಿ ಮಾತನಾಡಿ, ಕುಟುಂಬಗಳ ಬಡತನದ ಅರಿವು ನಿಮಗಿರಲಿ. ನಿಮ್ಮ ಶಕ್ತಿಶಾಲಿ, ಚೈತನ್ಯಯುಕ್ತ ಆಲೋಕಚನೆಗಳೇ ಸಾಧನೆಯ ಮೆಟ್ಟಿಲುಗಳು. ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಹೆಚ್ಚಿನ ತಯಾರಿಯೊಂದಿಗೆ ಉನ್ನತ ಹುದ್ದೆಯನ್ನು ಗಳಿಸುವ ತಯಾರಿ ಓದಿನೊಂದಿಗೆ ಸಾಗಲಿ ಎಂದು ಹೇಳಿದರು.
ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜಿ.ಎಸ್.ಶಿವಕುಮಾರ್ ಮಾತನಾಡಿ, ಇಂದಿನ ಜಗತ್ತನ್ನು ಜ್ಞಾನ ಆವರಿಸಿಕೊಂಡಿದೆ. ಜೀವನ ಹೂವಿನ ಹಾಸಿಗೆಯಲ್ಲ. ಇದರ ಅರಿವಿನೊಂದಿಗೆ ತಮ್ಮ ಸಾಧನೆ ನಿರಂತರವಾಗಿರಲಿ. ಬಹುಪಾಲು ಪದವೀಧರರು ತಮ್ಮ ಜೀವನವನ್ನು ಅರ್ಥಪೂರ್ಣವಾಗಿ ಕಟ್ಟಿಕೊಳ್ಳುವಲ್ಲಿ ವಿಫಲರಾಗುತ್ತಿರುವುದು ಬೇಸರದ ಸಂಗತಿ. ಉತ್ತಮವಾದ ಸಫಲ ಜೀವನ ನಿಮ್ಮದಾಗಲಿ ಹಾರೈಸಿದರು.
ರ‌್ಯಾಂಕ್ ವಿಜೇತರು, ಕ್ರೀಡೆಯಲ್ಲಿ ಸಾಧನೆ ಮಾಡಿದ ಹಾಗೂ ಕನ್ನಡದಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಪ್ರಾಚಾರ್ಯರಾದ ಡಾ. ಜಿ.ಆರ್.ಹೆಗಡೆ, ಕೋಟೋಜಿರಾವ್, ವಾಣಿಜ್ಯ ವಿಭಾಗದ ಮುಖ್ಯಸ್ಥ ಕೆ.ಸಿ.ರವೀಂದ್ರ, ಪ್ರಾಧ್ಯಾಪಕ ಡಾ. ಟಿ.ಆರ್. ಪರಶುರಾಮ, ಉಪನ್ಯಾಸಕರಾದ ಪೂರ್ಣಿಮಾ, ಸ್ಪಂದನಾ ಇತರರಿದ್ದರು.