

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಗುವನ್ನು ಮನುಷ್ಯನನ್ನಾಗಿ ಬೆಳೆಸುವುದು ಸುಲಭದ ಕೆಲಸವಲ್ಲ. ಪ್ರಾಯಕ್ಕೆ ಬಂದ ಮಕ್ಕಳನ್ನು ಸರಿಯಾಗಿ ದಾರಿಗೆ ತರುವುದು ಕಷ್ಟದ ಕೆಲಸ ಎಂದು ಪ್ರಾಧ್ಯಾಪಕಿ ಡಾ. ವಿನಯಾ ಒಕ್ಕುಂದ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂವು ರಶ್ಮಿ ಮಂಜುನಾಥ ನಾಯಕ ದತ್ತಿ ನಿಮಿತ್ತ ಮಂಗಳವಾರ ಏರ್ಪಡಿಸಿದ್ದ ಅಕ್ಷರ ರಶ್ಮಿ ಪ್ರಶಸ್ತಿ ಪ್ರದಾನ, ಉಪನ್ಯಾಸ ಹಾಗೂ ಬಡ ವಿದ್ಯಾಥಿರ್ಗಳಿಗೆ ಉಚಿತ ನೋಟಬುಕ್ ವಿತರಣೆ ಕಾರ್ಯಕ್ರಮದಲ್ಲಿ ಇಂದು ಮಕ್ಕಳ ಪೋಷಣೆಯಲ್ಲಿ ಪಾಲಕರ ಜವಾಬ್ದಾರಿ ಕುರಿತು ಉಪನ್ಯಾಸ ನೀಡಿದರು.
ಮಕ್ಕಳು ನಮ್ಮ ಕಲ್ಪನೆಯಲ್ಲಿರುವಂತೆ ಇರುವುದಿಲ್ಲ. ಮಗುವಿಗೆ ಅದರದೇ ಆದ ಭಾವನೆಗಳು ಇರುತ್ತವೆ. ಆ ಭಾವನೆಗಳು ಬೆಳೆಯಲು ಬಿಡಬೇಕು. ಮಕ್ಕಳು ಹಾದಿ ತಪ್ಪಲು ಹೆತ್ತವರೇ ಕಾರಣ. ನಮ್ಮ ಇರುವಿಕೆ ಹೇಗೆ ಇರುತ್ತದೆಯೋ ಅದನ್ನೇ ಮಕ್ಕಳು ಅನುಕರಣೆ ಮಾಡುತ್ತಾರೆ. ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗಿದೆ ಎಂದರು.
ಮಕ್ಕಳ ಸಾಹಿತಿ ನಿಂಗಣ್ಣ ಕುಂಟಿ ಮಾತನಾಡಿ, ಬೀಜ ಭೂಮಿಗೆ ಬಿದ್ದಾಗ ಗಾಳಿ, ಬಿಸಿಲು, ಮಣ್ಣು, ನೀರಿನ ಸಂಸ್ಕಾರ ಪಡೆದು ಬೆಳೆಯುತ್ತದೆ. ಅದೇ ರೀತಿ ಮಕ್ಕಳಿಗೆ ಮನಸ್ಸಿನಲ್ಲಿ ಒಳ್ಳೆಯ ಆಚಾರ&ವಿಚಾರಗಳ ಬೀಜ ಬಿತ್ತಿ ಬೆಳೆಸಬೇಕು ಎಂದರು.
ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ನಗರದ ವಿದ್ಯಾಥಿರ್ನಿ ಸ್ಫೂರ್ತಿ ತುರಾಯಿಗೆ ಅಕ್ಷರ ರಶ್ಮಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಆಯ್ದ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ಬುಕ್ ವಿತರಿಸಲಾಯಿತು. ಕೆ.ಎಚ್. ನಾಯಕ, ವೀರಣ್ಣ ಒಡ್ಡೀನ, ಶಶಿಧರ ತೋಡಕರ, ಎಂ.ಎಂ. ಚಿಕ್ಕಮಠ, ಎಸ್.ಎಂ. ದಾನಪ್ಪಗೌಡರ, ಗೀತಾ ಬಡಿಗೇರ, ಪ್ರಮೀಳಾ ಜಕ್ಕಣ್ಣವರ, ಎಂ.ಡಿ. ಒಕ್ಕುಂದ, ಬೇಬಿ ನಾಯಕ, ಎ.ಬಿ. ನಾಯಕ, ಬಿ.ಟಿ. ಬಿರಾದಾರ, ಇತರರು ಇದ್ದರು.
ಶಂಕರ ಕುಂಬಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಡಾ. ಧನವಂತ ಹಾಜವಗೋಳ ವಂದಿಸಿದರು.