

ತರೀಕೆರೆ: ಅರಣ್ಯ ಇಲಾಖೆ ಸಾರ್ವಜನಿಕರಿಗೆ ಪ್ರತ್ಯಕ್ಷವಲ್ಲದಿದ್ದರೂ, ಕಾಡು ಸಮೃದ್ಧಗೊಳಿಸುವ ಮೂಲಕ ಪರೋಕ್ಷವಾಗಿ ಉತ್ತಮ ಗಾಳಿ, ಪರಿಸರ ಕಲ್ಪಿಸಿಕೊಡಲು ಮಾತ್ರ ಸಾಧ್ಯ ಎಂದು ಲಕ್ಕವಳ್ಳಿ ಭದ್ರಾ ವನ್ಯಜೀವಿ ಅರಣ್ಯ ವಿಭಾಗದ ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಸಾಗರ್ ಹೇಳಿದರು.
ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ವನ್ಯ ಜೀವಿಗಳಿಗಿರುವ ಅಪಾಯ ಮತ್ತು ಸಂರಕ್ಷಣೆ ಕುರಿತಾದ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಪಶ್ಚಿಮಘಟ್ಟದ ಸಾಲಿನಲ್ಲಿರುವ ಭದ್ರಾ ವನ್ಯಜೀವಿ ವಿಭಾಗ ವಿಶ್ವ ಪಾರಂಪರಿಕ ತಾಣವಾಗಿ100ಕ್ಕೂ ಹೆಚ್ಚು ಸಸ್ಯ ಪ್ರಭೇದ, ಹುಲಿ, ಆನೆ, ಸೂಕ್ಷ್ಮಾಣುಗಳನ್ನು ಹೊಂದಿದೆ. 1974ನೇ ಸಾಲಿನಲ್ಲಿ ಆರಂಭವಾದ ಭದ್ರಾ ವನ್ಯಜೀವಿ ವಿಭಾಗ 50ವರ್ಷ ಪೂರ್ಣಗೊಳಿಸಿದರೆ, 1998ರಲ್ಲಿ ಅಸ್ತಿತ್ವಕ್ಕೆ ಬಂದ ಹುಲಿ ಸಂರಕ್ಷಿತ ಯೋಜನೆ 25ವಸಂತ ಪೂರೈಸಿರುವುದು ನಾಡಿಗೆ ಹಮ್ಮೆ ತಂದಿದೆ ಎಂದರು.
ತರೀಕೆರೆ ಉಪ ವಿಭಾಗದ ಎಸಿಎಫ್ ಉಮ್ಮರ್ ಬಾದ್‌ಷಾ ಮಾತನಾಡಿ, ಮಕ್ಕಳಲ್ಲಿ ಪರಿಸರ ಕಾಳಜಿ ಮೂಡಿಸುವ ಅನಿವಾರ್ಯತೆ ಹೆಚ್ಚಿದೆ. ಅಭಿವೃದ್ಧಿ ನೆಪದಲ್ಲಿ ಕೈಗೊಳ್ಳುತ್ತಿರುವ ಕಾರ್ಯಗಳಿಂದ ಅರಣ್ಯ ಕ್ಷೀಣಿಸಿ ಪ್ರಾಣಿ ಸಂತತಿ ನಶಿಸುತ್ತಿದ್ದು, ಪರಿಸರಕ್ಕೆ ಉಂಟಾಗುತ್ತಿರುವ ಹಾನಿ ಮತ್ತು ಜಲಮೂಲ ಮಲೀನಗೊಳ್ಳುತ್ತಿರುವುದನ್ನು ತಪ್ಪಿಸಿ ಜೀವ ವೈವಿಧ್ಯಗಳನ್ನು ರಕ್ಷಿಸಬೇಕು. ಇಲಾಖೆ ಪ್ರಾಣಿ ಮತ್ತು ಮಾನವ ಸಂಘರ್ಷ ತಪ್ಪಿಸಲು ಭದ್ರಾ ವನ್ಯಜೀವಿ ವ್ಯಾಪ್ತಿಯಲ್ಲಿದ್ದ 16 ಗ್ರಾಮಗಳನ್ನು ಜಿಲ್ಲೆಯ ವಿವಿಧೆಡೆ ಸ್ಥಳಾಂತರಿಸಿದೆ ಎಂದು ಮಾಹಿತಿ ನೀಡಿದರು.