ರಾಜಧಾನಿಯಲ್ಲಿ ವಾಹನ ಸಂಚಾರ ಹೆಚ್ಚಳ

Trafic Jam
Published on

ಬೆಂಗಳೂರು: ಲಾಕ್​ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ನಗರದಲ್ಲಿ ದಿನೇದಿನೆ ರಸ್ತೆಗೆ ಇಳಿಯುತ್ತಿರುವ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಎಲ್ಲೆಡೆ ಸಂಚಾರ ದಟ್ಟಣೆ ಉಂಟಾಗುತ್ತಿದೆ.

ನಗರದ ದ್ವಿಪಥ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಿ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ, ಕಳೆದೆರಡು ದಿನಗಳಿಂದ ಭಾರಿ ಮಳೆ ಸುರಿದಿರುವುದರಿಂದ ನಗರದ ಕೆಲ ರಸ್ತೆ ಗಳು ಹಾಳಾಗಿವೆ. ಹೀಗಾಗಿ ಸೋಮವಾರ (ಏ.27) ಬೆಳಗ್ಗೆ ಪುರಭವನ, ಕೆ.ಆರ್. ಮಾರುಕಟ್ಟೆ, ಮೈಸೂರು ರಸ್ತೆ ಸೇರಿ ಮುಂತಾದ ಕಡೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದ್ದ ದ್ವಿಪಥ ರಸ್ತೆಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಯಥಾಸ್ಥಿತಿ ಮುಂದುವರಿಕೆ: ಸರ್ಕಾರಿ ನೌಕರರು ಮತ್ತು ಕೆಎಸ್​ಪಿ ಕ್ಲಿಯರ್ ಪಾಸ್ ಪಡೆದವರು ಸೇರಿ 50 ಸಾವಿರಕ್ಕೂ ಅಧಿಕ ವಾಹನಗಳು ಸಂಚರಿಸುತ್ತಿವೆ. ಏಕಮುಖ ರಸ್ತೆಗಳಲ್ಲಿ ಒಟ್ಟಿಗೆ ವಾಹನ ಸಂಚರಿಸಿದರೆ ಅಪಘಾತ ಸಂಭವಿಸಬಹುದು. ಬೆಳಗ್ಗೆ ಕಚೇರಿಗೆ ತೆರಳುವರಿಗೆ ಮತ್ತು ಸಂಜೆ ಕಚೇರಿಯಿಂದ ಮನೆಗೆ ಹೋಗುವಾಗ ಮಾತ್ರ ದ್ವಿಪಥ ರಸ್ತೆಗಳಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಸಂಚಾರ ದಟ್ಟಣೆ

ಮೈಸೂರು ರಸ್ತೆ, ತುಮಕೂರು ರಸ್ತೆ, ಹೊಸೂರು, ವಿಮಾನ ನಿಲ್ದಾಣ ರಸ್ತೆಗಳಲ್ಲಿ ಸೋಮವಾರ ಸಂಚಾರ ದಟ್ಟಣೆ ಉಂಟಾಗಿತ್ತು. ಕೆಲವರು ತುರ್ತು ಪಾಸ್ ಪಡೆದು ನಗರದಿಂದ ಹೊರ ಹೋಗುತ್ತಿದ್ದಾರೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಂಚಾರ ವಿಭಾಗದ ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net