ಹುದ್ದೆಗಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳುವ ಪ್ರವೃತ್ತಿ ಹೆಚ್ಚಳ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕಳವಳ

18sgr3
ದೇವರಾಜ ಅರಸು ಪ್ರಶಸ್ತಿಗೆ ಪಾತ್ರವಾಗಿರುವ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಸಾಗರದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಕರ್ನಾಟಕ ಮುನ್ನಡೆ ಸಂಘದಿಂದ ಸನ್ಮಾನಿಸಲಾಯಿತು. ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ, ಎನ್.ಡಿ.ವಸಂತಕುಮಾರ್, ಕರ್ನಾಟಕ ಮುನ್ನಡೆ ಅಧ್ಯಕ್ಷ ಸಿ.ಎ.ಶಂಕರ್, ಪ್ರಮುಖರಾದ ಆರ್.ನಾರಾಯಣ, ಏಜಾಜ್ ಬಾಷಾ, ನಾರಾಯಣ ಅರಮನೆಕೇರಿ, ಮೋಹನ್ ಮೂರ್ತಿ, ಪರಮೇಶ್ವರಪ್ಪ ಇತರರಿದ್ದರು.
Published on

ಸಾಗರ: ಗೆದ್ದು ಅಧಿಕಾರ ಹಿಡಿಯುವುದಕ್ಕೆ ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಳ್ಳುವ ಪ್ರವೃತ್ತಿಯೊಂದು ಬೆಳೆಯುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ರಾಜಕಾರಣ ಒಂದು ಸೇವಾಲಯವೇ ಹೊರತು ಅಧಿಕಾರ ಮಾತ್ರ ಹಿಡಿಯುವ ಕ್ಷೇತ್ರವಲ್ಲ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ದೇವರಾಜ ಅರಸು ಪ್ರಶಸ್ತಿಗೆ ಭಾಜನರಾದ ಹಿನ್ನೆಲೆಯಲ್ಲಿ ಪ್ರೆಸ್ ಟ್ರಸ್ಟ್ ಆಫ್ ಸಾಗರ ಮತ್ತು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಶುಕ್ರವಾರ ಪ್ರತಿಕಾಭವನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಕರ್ನಾಟಕಕ್ಕೆ ದೇವರಾಜ ಅರಸು ಕೊಡುಗೆ ವಿಷಯ ಕುರಿತು ಮಾತನಾಡಿದರು.
ರಾಜಕೀಯದಲ್ಲಿ ಶುದ್ಧ ಜೀವನ ನಡೆಸಬೇಕು. ಈ ವಿಚಾರದಲ್ಲಿ ನಾನು ಸಲನಾಗಿದ್ದೇನೆ. ದೇವರಾಜ ಅರಸು ಅಂತಹವರೊಡನೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಸುದೈವ. 1952ರಲ್ಲಿ ಕಾಗೋಡಿನಲ್ಲಿ ಭೂ ಹೋರಾಟ ಆರಂಭವಾಯಿತು. ಗೋಪಾಲಗೌಡರು ಇದಕ್ಕೆ ಪ್ರೇರಣೆ ನೀಡಿದರು. ಅಂದು ಅವರೇ ನನ್ನನ್ನು ಓದುವಂತೆ ಪ್ರೇರೇಪಿಸಿದರು. ಅವರ ಸಮಾಜವಾದಿ ಸಿದ್ಧಾಂತಗಳು ನನ್ನನ್ನು ಆಕರ್ಷಿಸಿದವು. ಮುಂದೆ ಆ ಸಿದ್ಧಾಂತಗಳನ್ನು ನನ್ನ ಬದುಕಿನಲ್ಲಿ ಮೈಗೂಡಿಸಿಕೊಂಡೆ ಎಂದು ಆರಂಭದ ದಿನಗಳಿಗೆ ಜಾರಿದರು.
1972ರಲ್ಲಿ ಶಾಸನ ಸಭೆಗೆ ನಾನು ಆಯ್ಕೆ ಆದಾಗ ಅರಸು ಅವರು ಮುಖ್ಯಮಂತ್ರಿ ಆಗಿದ್ದರು. ಅವರ ಸಮಸಮಾಜದ ಪರಿಕಲ್ಪನೆ, ಭೂ ಸುಧಾರಣೆ ಬಗ್ಗೆ ಇದ್ದ ಕಾಳಜಿ ನನ್ನ ಮೇಲೆ ಪ್ರಭಾವ ಬೀರಿತು. ಉಳುವವನೇ ಹೊಲದೊಡೆಯ ಕಾನೂನನ್ನು ಬಹಳ ಪರಿಣಾಮಕಾರಿಯಾಗಿ ಜಾರಿಗೆ ತರುವಲ್ಲಿ ಅರಸು ಕೊಡುಗೆ ಬಹು ದೊಡ್ಡದು. ಅಧಿಕಾರ ಸಿಕ್ಕಾಗ ನಾನು ಜನರ ಒಳಿತಿಗಾಗಿ ಹೋರಾಟ ಮಾಡುತ್ತ ಬಂದಿದ್ದೇನೆ. ಜನರಿಗೆ ಒಳ್ಳೆಯ ಕೆಲಸ ಮಾಡುವ ಮೂಲಕವೇ ಅದರಲ್ಲಿ ದೇವರನ್ನು ಕಂಡವನು ನಾನು. ಜೀವನದಲ್ಲಿ ಕಷ್ಟ-ಸುಖ ಎರಡನ್ನೂ ಕಂಡಿದ್ದೇನೆ. ನನ್ನ ಸುಧೀರ್ಘ ರಾಜಕೀಯ ಜೀವನದಲ್ಲಿ ಮಾಡಿರುವ ಸಾಮಾಜಿಕ ಬದ್ಧತೆಯ ಕೆಲಸಗಳು ತೃಪ್ತಿ ತಂದಿದೆ ಎಂದರು.
ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಸಾಮಾಜಿಕ ನ್ಯಾಯವನ್ನು ಕೊಡಲು ಅರಸು ಹಾಗೂ ಕಾಗೋಡು ತಿಮ್ಮಪ್ಪ ಅವರ ಕಾಯಕ ಬಹು ದೊಡ್ಡದು. ಕಾಗೋಡು ತತ್ವ, ಸಿದ್ಧಾಂತ ನಮಗೆಲ್ಲರಿಗೂ ಆದರ್ಶ. ಕರ್ನಾಟಕದಲ್ಲಿ ನಕ್ಸಲ್ ಚಳವಳಿ ಇಲ್ಲದಿರಲು ಭೂ ಹಂಚಿಕೆಯೂ ಒಂದು ಕಾರಣ. ಕಾಗೋಡು ತಿಮ್ಮಪ್ಪ ಬಡವರು, ಭೂಹೀನರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಹೋರಾಟದ ಮೂಲಕವೇ ಬೆಳಕು ಚೆಲ್ಲಿದರು. ಅವರ ಸುಧೀರ್ಘ ಅನುಭವವನ್ನು ನಾವೆಲ್ಲ ಬಳಸಿಕೊಳ್ಳಬೇಕು ಎಂದು ಹೇಳಿದರು.
ಕಾಗೋಡು ತಿಮ್ಮಪ್ಪ ಕುರಿತು ಹಿರಿಯ ಪತ್ರಕರ್ತ ಕೆ.ಎನ್.ವೆಂಕಟಗಿರಿ ಅಭಿನಂದನಾ ಮಾತುಗಳನ್ನಾಡಿದರು. ಜಿಪಂ ಮಾಜಿ ಸದಸ್ಯೆ ಅನಿತಾಕುಮಾರಿ ಇತರರಿದ್ದರು.

ತಂದೆಯವರು ಕೌಟುಂಬಿಕವಾಗಿ ಸಮಯ ಕಳೆದದ್ದು ಕಡಿಮೆ. ಜನಪರ ಹೋರಾಟವೇ ಅವರ ಬದುಕಾಗಿತ್ತು. ದೇವರಾಜ ಅರಸು ಅವರ ಬದ್ಧತೆಯನ್ನು ಇಂದಿಗೂ ಅವರು ಸದಾ ನೆನಪು ಮಾಡಿಕೊಳ್ಳುತ್ತಾರೆ. ತಂದೆಯವರ ಹೋರಾಟದ ಬದುಕು, ಅಧ್ಯಯನ, ಆದರ್ಶ ನಮಗೆಲ್ಲ ಮಾರ್ಗಸೂಚಿಯಾಗಿದೆ.ಡಾ. ರಾಜನಂದಿನಿ ಕಾಗೋಡು

ಜೀವನದ ಕೊನೆಯ ಕಾಲಘಟ್ಟದಲ್ಲಿರುವ ನನಗೆ ಪ್ರಶಸ್ತಿಯಿಂದ ಸಂತೋಷವಾಗಿದೆ. ಹೃದಯ ತುಂಬಿ ಬಂದಿದೆ. ಸಾಗರ ಕ್ಷೇತ್ರದ ಜನರ ಪ್ರೀತಿ, ವಿಶ್ವಾಸಕ್ಕೆ ನಾನು ಎಂದಿಗೂ ಆಬಾರಿ. ರಾಜಕಾರಣದಲ್ಲಿ ಎಲ್ಲ ವರ್ಗದ ಜನರ ವಿಶ್ವಾಸ ಗಳಿಸಿ, ಊರಿನ ಸರ್ವತೋಮುಖ ಅಭಿವೃದ್ಧಿಗೆ ತೊಡಗಿಕೊಳ್ಳಬೇಕು. ಆಗ ಮಾತ್ರ ನಮ್ಮ ಸ್ಥಾನಕ್ಕೊಂದು ಅರ್ಥ ಕಲ್ಪಿಸಿದಂತಾಗುತ್ತದೆ.ಕಾಗೋಡು ತಿಮ್ಮಪ್ಪ, ಮಾಜಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net