

ತರೀಕೆರೆ: ಮಣ್ಣು ಪ್ರಕೃತಿ ನೀಡಿರುವ ಅತ್ಯಮೂಲ್ಯ ಸಂಪತ್ತು ಎಂದು ಬಾವಿಕೆರೆ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಕ್ಷೇತ್ರ ಅಧೀಕ್ಷಕಿ ಡಾ.ಪವಿತ್ರ ಹೇಳಿದರು.
ತಾಲೂಕಿನ ಬಾವಿಕೆರೆ ಗ್ರಾಮದ ಅಡಕೆ ತೋಟವೊಂದರಲ್ಲಿ ಕೃಷಿ ವಿಸ್ತರಣಾ ಕಾರ್ಯಕ್ರಮದಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್‌ನಿಂದ ಏರ್ಪಡಿಸಿದ್ದ ರೈತ ಕ್ಷೇತ್ರ ಪಾಠ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ರೈತರ ಆದಾಯ ದ್ವಿಗುಣಗೊಳಿಸಿಕೊಳ್ಳಲು ಮಣ್ಣಿನ ಪರೀಕ್ಷೆ ಜತೆ ಪೋಷಕಾಂಶ ಬಳಕೆ ಅತ್ಯಗತ್ಯ ಎಂದರು.
ಒಂದೇ ಕ್ಷೇತ್ರದಲ್ಲಿ ನಿರಂತರ ಏಕ ಬೆಳೆ ಬೆಳೆಸುವುದು ಒಳ್ಳೆಯದಲ್ಲ. ಒಂದೇ ಬೆಳೆ ಬೆಳೆಯುವುದರಿಂದ ಮಣ್ಣಿನಲ್ಲಿರುವ ಪೋಷಕಾಂಶ ಲಭ್ಯತೆ ಪ್ರಮಾಣ ಕಡಿಮೆಯಾಗಲಿದೆ. ಮಣ್ಣಿನ ಕೆಲ ಭೌತಿಕ ಮತ್ತು ರಾಸಾಯನಿಕ ಗುಣಲಕ್ಷಣ ಅರಿತುಕೊಳ್ಳುವ ಸಲುವಾಗಿ ಆಗಾಗ ಮಣ್ಣಿನ ಪರೀಕ್ಷೆಮಾಡಿಸಿಕೊಳ್ಳಬೇಕು ಎಂದು ಹೇಳಿದರು.
ತೋಟಗಾರಿಕೆ ಸಹಾಯಕ ನಿರ್ದೇಶಕ ಕೆ.ಯತಿರಾಜ್ ಮಾತನಾಡಿ, ರೈತರು ಕೃಷಿ ಭೂಮಿಯಲ್ಲಿ ಹಸಿರು ಗೊಬ್ಬರ, ಸೆಣಬು, ಅಲಸಂದೆ, ಹೆಸರು, ಹುರುಳಿ, ಡಯಂಚಾ ಬೆಳೆಸುವ ಮೂಲಕ ಮಣ್ಣಿನ ರಸಸಾರ ಹೆಚ್ಚಿಸಬೇಕು. ಏಕಬೆಳೆ ಬದಲಾಗಿ ಸಮಗ್ರ ಕೃಷಿ ಪದ್ಧತಿ ಕೈಗೊಳ್ಳಬೇಕು. ತೋಟಗಾರಿಕೆ ಇಲಾಖೆ ಮೂಲಕ ಹನಿ ನೀರಾವರಿ ಅಳವಡಿಕೆ, ಕೃಷಿಹೊಂಡ ನಿರ್ಮಾಣ, ಜೇನು ಪೆಟ್ಟಿಗೆ, ಕೃಷಿ ಯಂತ್ರಗಳ ಖರೀದಿಗೆ ಸಹಾಯಧನ ನೀಡಲಾಗುತ್ತಿದ್ದು ರೈತರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಕೆ.ಕುಸುಮಧರ್, ಸಮಗ್ರ ಕೃಷಿಕ ನಂಜೇಗೌಡ, ತೋಟಗಾರಿಕೆ ಇಲಾಖೆ ಅಧಿಕಾರಿ ಸುರೇಶ್‌ಬಾಬು, ಕೃಷಿ ಮೇಲ್ವಿಚಾರಕ ಸಂತೋಷ್ ಮತ್ತಿತರರಿದ್ದರು.