ರಾಜ್ಯಾದ್ಯಂತ ಹೆಚ್ಚುತ್ತಿರುವ ಮಳೆ, ಕೊಳೆಯುತ್ತಿರುವ ಬೆಳೆ, ಹೆಕ್ಟರ್‌ಗೆ ರೂ.25 ಸಾವಿರ ಪರಿಹಾರ ಕಲ್ಪಿಸಲು ನಡಹಳ್ಳಿ ಆಗ್ರಹ

NADAHALLI PRESS MEET
Published on

ವಿಜಯಪುರ: ರಾಜ್ಯಾದ್ಯಂತ ಹೆಚ್ಚುತ್ತಿರುವ ಮಳೆಯಿಂದಾಗಿ ಬೆಳೆ ಹಾನಿಯುಂಟಾಗಿದ್ದು, ಕೂಡಲೇ ಸರ್ಕಾರ ಹೆಕ್ಟರ್‌ಗೆ 25 ಸಾವಿರ ರೂಪಾಯಿ ಪರಿಹಾರ ನೀಡಬೇಕೆಂದು ಬಿಜೆಪಿ ರೈತ ಮೋರ್ಚಾದ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಆಗ್ರಹಿಸಿದರು.

ಹವಾಮಾನ ಇಲಾಖೆ ವದರಿ ಪ್ರಕಾರ ಮುಂದಿನ ನಾಲ್ಕು ದಿನ ‘ಯಲ್ಲೋ ಅಲರ್ಟ್’ ಘೋಷಣೆ ಮಾಡಲಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಮಹಾರಾಷ್ಟ್ರ ದ ಜಲಾಶಯಗಳು ಭರ್ತಿಯಾಗಿದ್ದರಿಂದ ಹೆಚ್ಚಿನ ನೀರು ಹರಿಬಿಡಲಾಗುತ್ತಿದೆ. ಕಾವೇರಿಯಿಂದ ಕೃಷ್ಣೆಯವರೆಗೆ ಬಹುತೇಕ ಎಲ್ಲ ಜಲಾಶಯಗಳು ಭರ್ತಿಯಾಗಿವೆ. ನದಿ ಪಾತ್ರಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಉತ್ತರ ಕರ್ನಾಟಕದಲ್ಲಿ ಈರುಳ್ಳಿ, ಹೆಸರು, ತೊಗರಿ ಬೆಳೆ ಕೊಳೆಯುತ್ತಿದೆ. ಹೀಗಾಗಿ ಕೂಡಲೇ ಸಮೀಕ್ಷೆ ನಡೆಸಿ ಪರಿಹಾರ ಕಲ್ಪಿಸಬೇಕೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು.

2019 ರಲ್ಲಿ ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದಾಗ ಇಂಥದ್ದೇ ಸ್ಥಿತಿ ನಿರ್ಮಾಣವಾಗಿತ್ತು. ಆಗ 14 ಜಿಲ್ಲೆಗಳಿಗೆ ಪ್ರವಾಸ ಮಾಡಿ ತಕ್ಷಣಕ್ಕೆ ಪರಿಹಾರ ಕೊಡುವ ಕೆಲಸ ಮಾಡಿದ್ದರು. ತುರ್ತು ನಿರ್ವಹಣೆಗಾಗಿ 24 ಗಂಟೆಯಲ್ಲಿ ಹತ್ತು ಸಾವಿರ ಪರಿಹಾರ ಕಲ್ಪಿಸಿದ್ದರು. ಸಂಪೂರ್ಣ ಮನೆ ಬಿದ್ದರೆ 5 ಲಕ್ಷ ಪರಿಹಾರ ಕೊಡುವ ಕೆಲಸ ಮಾಡಿದ್ದರು. ಎಸ್‌ಡಿಆರ್‌ಎಫ್- ಎನ್‌ಡಿಆರ್‌ಎಫ್ ನಿಯಮಾವಳಿ ಹೊರತುಪಡಿಸಿ ಹೆಚ್ಚುವರಿಯಾಗಿ ಪ್ರತಿ ಹೆಕ್ಟೇರ್‌ಗೆ ಹತ್ತು ಸಾವಿರ ಪರಿಹಾರ ನೀಡಲಾಗಿತ್ತು. ಅದೇ ರೀತಿ ಸಿದ್ದರಾಮಯ್ಯ ಸರ್ಕಾರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡದೇ ಕೂಡಲೇ ಪರಿಹಾರ ನೀಡಬೇಕೆಂದರು.

ಸದ್ಯ ಅಧಿವೇಶನ ನಡೆಯುತ್ತಿದ್ದು ಎಲ್ಲ ಶಾಸಕರು ಮತ್ತು ಸಚಿವರು ಸದನದಲ್ಲಿದ್ದಾರೆ. ಬಾಧಿತ ಪ್ರದೇಶಗಳಿಗೆ ತುರ್ತಾಗಿ ಭೇಟಿ ನೀಡಬೇಕು. ಜಲಾಶಯ ವ್ಯಾಪ್ತಿಯಲ್ಲಿ ಮುಂಜಾಗ್ರತೆ ಕೈಗೊಳ್ಳಬೇಕು. ಡಂಗುರ ಸಾರಬೇಕು. ಸುರಕ್ಷತಾ ಕಿಟ್ ಸಿದ್ಧಪಡಿಸಿಟ್ಟುಕೊಳ್ಳಬೇಕು ಎಂದರು.

ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ಸುರೇಶ ಬಿರಾದಾರ, ಎಸ್.ಎ. ಪಾಟೀಲ, ರಾಜಶೇಖರ ಡೊಳ್ಳಿ, ಬಸವರಾಜ ವಣಕ್ಯಾಳ, ಈರಣ್ಣ ರಾವೂರ, ಸಂಜಯ ಪಾಟೀಲ ಕನಮಡಿ, ಸಾಬು ಮಾಶ್ಯಾಳ ಮತ್ತಿತರರಿದ್ದರು. ಬಳಿಕ ಜಿಲ್ಲಾಡಳಿತ ಕಚೇರಿಗೆ ಭೇಟಿ ನೀಡಿ ಪರಿಹಾರಕ್ಕೆ ಆಗ್ರಹಿಸಿ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net