

ಹಿರೇಕೆರೂರ: ಜ್ಞಾನ ಸಂಪಾದನೆ ಮಾಡಿಕೊಳ್ಳುವಲ್ಲಿ ಗ್ರಂಥಾಲಯಗಳ ಪಾತ್ರ ಮಹತ್ವದ್ದಾಗಿದೆ. ಪ್ರತಿಯೊಬ್ಬರೂ ಓದುವ ಹವ್ಯಾಸ ರೂಢಿಸಿಕೊಂಡು ಗ್ರಂಥಾಲಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಪಪಂ ಮುಖ್ಯಾಧಿಕಾರಿ ಕೋಡಿ ಭೀಮರಾಯ ಎನ್.ಟಿ. ಹೇಳಿದರು.
ಪಟ್ಟಣದ ಪಪಂ ಕಚೇರಿಯ ಆವರಣದಲ್ಲಿನ ಸಾರ್ವಜನಿಕ ಗ್ರಂಥಾಲಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಣೆ ಹಾಗೂ ಪುಸ್ತಕ ಪ್ರದರ್ಶನ, ಸದಸ್ಯತ್ವ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಂಥಾಲಯಗಳು ಸಾರ್ವಜನಿಕರಿಗೆ ಜ್ಞಾನ ಭಂಡಾರ ಮತ್ತು ಮಹತ್ವವಾದ ಮಾಹಿತಿ ಸಂಗ್ರಹಿಸಿಕೊಳ್ಳುವ ಕೇಂದ್ರವಾಗಿವೆ. ಇಂದಿನ ದಿನಮಾನಗಳಲ್ಲಿ ಪುಸ್ತಕ, ಕಾದಂಬರಿ, ಅನೇಕ ವಿಷಯಗಳ ಕುರಿತ ಪುಸ್ತಕಗಳನ್ನು ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ. ಇದರಿಂದ ನಮ್ಮ ಸುತ್ತಮುತ್ತ, ರಾಜ್ಯ ಹೊರರಾಜ್ಯ, ದೇಶ ವಿದೇಶಗಳಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಅರಿವು ನಮಗೆ ತಿಳಿಯದಂತಾಗಿದೆ. ನಮ್ಮ ದೇಶದ ಸಂಸ್ಕೃತಿ, ಪೂರ್ವಜರ ಪರಿಚಯಗಳನ್ನು ತಿಳಿದುಕೊಳ್ಳುವುದರಿಂದ ವಂಚಿತರಾಗುತ್ತಿದ್ದೇವೆ ಎಂದರು.
ಗಂಥಾಲಯದ ಶಾಖಾ ಪ್ರಭಾರ ವಿಜಯಕುಮಾರ ನಲವಾಲದ, ಸಾರ್ವಜನಿಕರಿಗೆ ಗ್ರಂಥಾಲಯಗಳ ಮಹತ್ವ ಸಾರುವ ಮತ್ತು ಉತ್ತೇಜನ ನೀಡುವ ಉದ್ದೇಶದಿಂದ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನ. 20ರವರೆಗೆ ಪುಸ್ತಕ ಪ್ರದರ್ಶನ, ಸದಸ್ಯತ್ವ ಆಂದೋಲನ ನಡೆಯಲಿದ್ದು, ಓದುಗರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಗ್ರಂಥಾಲಯ ಇಲಾಖೆ ವತಿಯಿಂದ ಉಚಿತವಾಗಿ ಮನೆಯಲ್ಲಿ ಕುಳಿತು ಪುಸ್ತಕ ಓದಿಗಾಗಿ ಡಿಜಿಟಲ್ ಗ್ರಂಥಾಲಯ ಆಪ್ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಪಪಂ ಸದಸ್ಯರಾದ ಅಲ್ತಾಫ್ಖಾನ್ ಪಠಾಣ, ಸನಾವುಲ್ಲಾ ಮಕಾನದಾರ, ಮಾಜಿ ಸೈನಿಕ ಆಂಜನೇಯ ಆರ್.ಎಚ್., ಭಾಷಾ ರಟ್ಟಿಹಳ್ಳಿ ಸೇರಿದಂತೆ ಓದುಗರು ಹಾಗೂ ಸಾರ್ವಜನಿಕರು ಇದ್ದರು.