

ಮಡಿಕೇರಿ:
ಕೊಡಗಿನಲ್ಲಿ ಅಮೂಲ್ಯ ಅರಣ್ಯ ಪ್ರದೇಶ ಮಾತ್ರವಲ್ಲ ದೊಡ್ಡ ಪ್ರಮಾಣದಲ್ಲಿ ಕೆರೆಗಳ ಒತ್ತುವರಿಯೂ ನಡೆದಿದೆ. ಜಿಲ್ಲೆಯಲ್ಲಿ ಒಟ್ಟು 897 ಕೆರೆಗಳು ಇರುವುದಾಗಿ ಸಣ್ಣ ನೀರಾವರಿ ಇಲಾಖೆ ಅಂಕಿ ಅಂಶಗಳು ಹೇಳುತ್ತಿದ್ದು, ಈ ಪೈಕಿ 114 ಕೆರೆಗಳು ಒತ್ತುವರಿ ಆಗಿರುವುದನ್ನು ಗುರುತಿಸಲಾಗಿದೆ. ಬಹುತೇಕ ಕೆರೆಗಳ ಒತ್ತುವರಿ ತೆರವು ಕಾರ್ಯ ನಡೆದಿದ್ದು, ಇನ್ನೂ ಕೆಲವು ಕೆರೆಗಳು ಅತಿಕ್ರಮಣಕಾರರ ಕಪಿ ಮುಷ್ಠಿಯೊಳಗೇ ಉಳಿದುಕೊಂಡಿದೆ.
ಮುಂಗಾರು ಮಳೆ ಹೀಗೆಯೇ ಸುರಿಯುತ್ತದೆ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಒಂದು ವರ್ಷ ಅತಿವೃಷ್ಠಿ ಆದರೆ ಮತ್ತೊಂದು ವರ್ಷ ಅನಾವೃಷ್ಠಿಯೂ ಆಗಬಹುದು. ಅಥವಾ ವಾಡಿಕೆಯ ಮಳೆಯೂ ಸುರಿಯಬಹುದು. ಹಾಗಾಗಿ ನೀರಿನ ಮೌಲ್ಯ ಅರಿತುಕೊಂಡಿದ್ದ ಹಳೆಯ ತಲಮಾರು ಜೀವ ಜಲ ಕಾಪಿಟ್ಟುಕೊಳ್ಳುವ ಉದ್ದೇಶದಿಂದ ಹಲವು ತಂತ್ರಗಳ ಮೊರೆ ಹೋಗಿದ್ದರು. ಇದರಲ್ಲಿ ಪ್ರತಿ ಊರುಗಳಲ್ಲೂ ಕಂಡುಬರುವ ಕೆರೆಗಳಿಗೂ ಮಹತ್ವದ ಸ್ಥಾನವಿದೆ.
ಒಳನಾಡು ಜಲಸಂಪನ್ಮೂಲಗಳನ್ನು ಪಟ್ಟಿ ಮಾಡುತ್ತಾ ಹೋದರೆ ಇದರಲ್ಲಿ ಕೆರೆಗಳ ಪಾತ್ರ ಪ್ರಮುಖವಾದದ್ದು. ಮಳೆಗಾಲದಲ್ಲಿ ಮಳೆನೀರು ಹಿಡಿದಿಡುವುದರ ಪ್ರಾಮುಖ್ಯತೆ ಅರಿತಿದ್ದ ಜನರು ಪ್ರಾಚೀನ ಕಾಲದಿಂದಲೂ ಪ್ರತಿ ಊರುಗಳಲ್ಲೂ ಕೆರೆಗಳ ನಿರ್ಮಾಣಕ್ಕೆ ಆದ್ಯತೆ ಕೊಟ್ಟಿದ್ದರು. ಒಂದೊAದು ಊರಿನಲ್ಲಿರುವ ಕೆರೆಗೂ ಪೌರಾಣಿಕ, ಐತಿಹಾಸಿಕ ಹಾಗೂ ಜಾನಪದ ಕತೆಗಳ ನಂಟು ಕಾಣಬಹುದಾಗಿದೆ.
ಬಹುತೇಕ ಕೆರೆಗಳು ಆಯಾಯ ಕಾಲಘಟ್ಟದಲ್ಲಿ ಅಂದಿನ ರಾಜ, ಮಹಾರಾಜರು ನಿರ್ಮಿಸಿದ್ದರೆ, ಊರಿನ ಪಾಳೇಗಾರರು, ಮುಖಂಡರು ತೋಡಿಸಿದ ಉದಾಹರಣೆಗಳಿವೆ. ಮತ್ತೆ ಕೆಲವು ಕಡೆ ಗ್ರಾಮಸ್ಥರೇ ಸೇರಿಕೊಂಡು ಕೆರೆ ಕಟ್ಟಿರುವುದನ್ನು ಕಾಣಬಹುದಾಗಿದೆ. ಎತ್ತರದ ಪ್ರದೇಶದಿಂದ ನೀರು ಹರಿದು ಬಂದು ಒಂದೆಡೆ ಸಂಗ್ರಹವಾಗಿ ನೈಸರ್ಗಿಕವಾಗಿ ನಿರ್ಮಾಣವಾದ ಕೆರೆಗಳ ಸಂಖ್ಯೆಯೇನೂ ಕಡಿಮೆ ಇಲ್ಲ.
ಮೊದಲೆಲ್ಲಾ ಗ್ರಾಮೀಣ ಭಾಗಗಳಲ್ಲಿ ಕೃಷಿಗೆ, ಪಶುಗಳಿಗೆ, ದೈನಂದಿನ ಬಳಕೆಗೆ ಹೆಚ್ಚು ನೀರಿನ ಅವಶ್ಯಕತೆ ಇತ್ತು. ಹಾಗಾಗಿ ಸ್ಥಳೀಯವಾಗಿ ಬೆಟ್ಟಗುಡ್ಡಗಳಿಂದ ಬರುವ ಸಣ್ಣ ಪುಟ್ಟ ತೊರೆ, ಹಳ್ಳಗಳನ್ನು ಗಮನಿಸಿ, ತಗ್ಗಿನಲ್ಲಿ ಕೆರೆ ಕಟ್ಟುವುದು ಸಾಂಪ್ರದಾಯ ಎನ್ನುವಂತೆ ಗ್ರಾಮೀಣ ಪ್ರದೇಶಗಳಲ್ಲಿ ಕೆರೆಗಳ ನಿರ್ಮಾಣ ಕಾರ್ಯ ನಡೆದು ಬಂದಿತ್ತು. ನದಿ ನೀರಿನ ಹರಿವು ಇಲ್ಲದ ಕಡೆಗಳಲ್ಲಿ ಪರ್ಯಾಯವಾಗಿ ಸಣ್ಣ ಪ್ರಮಾಣದಲ್ಲಿ ನೀರು ಹಿಡಿದಿಡುವ ಉದ್ದೇಶಕ್ಕೂ ಕೆರೆಗಳ ನಿರ್ಮಾಣ ಮಾಡಲಾಗುತ್ತಿತ್ತು. ಕೆರೆ ಕಟ್ಟೆ ಕಟ್ಟಿಸುವುದು ಪ್ರಜೆಗಳ ಹಿತರಕ್ಷಣೆಯ ರಾಜಧರ್ಮ ಎನ್ನುತ್ತದೆ ಇತಿಹಾಸ.
ರಾಜರ ಆಳ್ವಿಕೆ, ಆ ನಂತರ ಬ್ರಿಟಿಷರ ಪಾರುಪತ್ಯೆಗೆ ಒಳಪಟ್ಟು, ಸ್ವಾತಂತ್ರö್ಯಕ್ಕೂ ಮೊದಲು ಪ್ರತ್ಯೇಕ ರಾಜ್ಯವೂ ಆಗಿದ್ದ ಕೊಡಗಿನಲ್ಲೂ ಕೆರೆಗಳ ಸಂಖ್ಯೆಯ ಕಡಿಮೆ ಏನಿಲ್ಲ. ಕಾವೇರಿ, ಲಕ್ಷö್ಮಣತೀರ್ಥ, ಹೇಮಾವತಿ, ಹಾರಂಗಿ ಸೇರಿದಂತೆ ದೊಡ್ಡ ಮತ್ತು ಚಿಕ್ಕಪುಟ್ಟ ನದಿಗಳು ಹರಿಯುವ ಭೂಮಿ ಇದಾದರೂ ಅವಿಭಜಿತ ಸೋಮವಾರಪೇಟೆ ಮತ್ತು ವಿರಾಜಪೇಟೆ ತಾಲೂಕಿನಲ್ಲಿ ಹೆಚ್ಚು ಕೆರೆ-ಕಟ್ಟೆಗಳು ಕಂಡು ಬರುತ್ತದೆ.
ಸಣ್ಣ ನೀರಾವರಿ ಇಲಾಖೆ ಮೂಲಗಳ ಪ್ರಕಾರ ಕೊಡಗಿನಲ್ಲಿ 897 ಕೆರೆಗಳಿವೆ. ಈ ಪೈಕಿ ಅತೀ ಹೆಚ್ಚು ಅಂದರೆ 642 ಕರೆಗಳನ್ನು ಅವಿಭಜಿತ ಸೋಮವಾರಪೇಟೆ ತಾಲೂಕಿನಲ್ಲಿ ಕಾಣಬಹುದಾಗಿದೆ. ಪೊನ್ನಂಪೇಟೆ ತಾಲೂಕಿನಲ್ಲಿ 177 ಕೆರೆಗಳಿದ್ದರೆ ಮಡಿಕೇರಿ ತಾಲೂಕಿನಲ್ಲಿ 78 ಕೆರೆಗಳನ್ನು ಗುರುತಿಸಲಾಗಿದೆ. ಒಂದು ಕಾಲದಲ್ಲಿ ಕೃಷಿ ಉದ್ದೇಶಕ್ಕೆ, ಸಾಕು ಪ್ರಾಣಿಗಳಿಗೆ, ಜನಸಾಮಾನ್ಯರ ದೈನಂದಿನ ಬಳಕೆಗೆ ಈ ಕೆರೆಗಳ ನೀರನ್ನೇ ಬಹುತೇಕ ಅವಲಂಬಿಸಲಾಗಿತ್ತು.
ಬದಲಾದ ಕಾಲಘಟ್ಟದಲ್ಲಿ ಹಾರಂಗಿ, ಚಿಕ್ಲಿಹೊಳೆ ಅಣೆಕಟ್ಟೆಗಳ ನಿರ್ಮಾಣ, ಭತ್ತ ಬೆಳೆಯುವ ಪ್ರದೇಶದಲ್ಲಿ ಇಳಿಕೆ, ವಾಣಿಜ್ಯ ಬೆಳೆಗಳ ಆಕರ್ಷಣೆ, ಹೆಚ್ಚುತ್ತಿರುವ ನಗರೀಕರಣ, ಲೇ ಔಟ್‌ಗಳ ನಿರ್ಮಾಣ, ನಿವೇಶನಗಳಾಗಿ ಪರಿವರ್ತನೆಗೊಳ್ಳುತ್ತಿರುವ ಭತ್ತದ ಗದ್ದೆಗಳು, ಏರುಗತಿಯಲ್ಲಿ ಇರುವ ಪ್ರವಾಸೋದ್ಯಮ, ಅತಿಯಾದ ಕೊಳವೆ ಬಾವಿಗಳ ಸಂಖ್ಯೆ ಮತ್ತಿತರ ಕಾರಣಗಳಿಂದ ಕೆರೆಗಳ ಮೇಲಿನ ಅವಲಂಬನೆ ಕಡಿಮೆ ಆಗುತ್ತಿದ್ದಂತೆ, ಜೀವಜಲದ ರಕ್ಷಣೆ ಮಾಡುತ್ತಿದ್ದ ಕೆರೆಗಳ ಬಗೆಗೆ ನಿರ್ಲಕ್ಷö್ಯ ಬೆಳೆಯಲಾರಂಭಿಸಿತು.
ಮತ್ತೊAದು ಕಡೆ ಭೂಮಿ ಬೆಲೆ ಗಗನಕ್ಕೆ ಏರುತ್ತಿದ್ದಂತೆಯೇ ಭೂಗಳ್ಳರ ಕಣ್ಣು ಕೆರೆಗಳ ಮೇಲೆ ಬೀಳಲಾರಂಭಿಸಿತು. ಪ್ರಭಾವ ಬಳಸಿ ಕೆರೆ ಜಾಗ ಅತಿಕ್ರಮಿಸಿಕೊಳ್ಳುವ ಅತಿಕ್ರಮಣಕೋರರು ಅದಕ್ಕೆ ಮಣ್ಣು ತುಂಬಿಸಿ ಕೆರೆಯ ಕುರುಹೂ ಇಲ್ಲದಂತೆ ಮಾಡಿರುವುದು ಕೂಡ ಇದೆ. ಕುಶಾಲನಗರದಂತಹ ಭಾಗದಲ್ಲಿ ಕೆಲವು ಕೆರೆಗಳು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಉದ್ದೇಶಕ್ಕೂ ಬಳಕೆ ಆಗುತ್ತಿದೆ. ಲೇಔಟ್‌ಗಳು ನಿರ್ಮಾಣ ಆಗಿ, ಮಳೆಗಾಲದಲ್ಲಿ ಪ್ರವಾಹಪೀಡಿತ ಪ್ರದೇಶ ಎನ್ನುವ ಹಣೆಪಟ್ಟಿಯನ್ನೂ ಅಂಟಿಸಿಕೊAಡಿವೆ.
ಅಪರೂಪದ ಪ್ರಕರಣಗಳಲ್ಲಿ ಕೆರೆ ಜಾಗಗಳಲ್ಲಿ ತೋಟ, ಗದ್ದೆಗಳು ಪ್ರತ್ಯಕ್ಷವಾಗಿರುವುದು ಕೂಡ ಇದೆ. ಹೀಗೆ ಕೊಡಗಿನಲ್ಲಿರುವ 897 ಕೆರೆಗಳ ಪೈಕಿ 114 ಕೆರೆಗಳು ಒತ್ತುವರಿ ಆಗಿರುವುದಾಗಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಅವಿಭಜಿತ ಸೋಮವಾರಪೇಟೆ ತಾಲೂಕಿನಲ್ಲಿ ಅತೀ ಹೆಚ್ಚು ಅಂದರೆ 90 ಕೆರೆಗಳನ್ನು ಅತಿಕ್ರಮಣ ಮಾಡಿಕೊಳ್ಳಲಾಗಿದೆ. ಮಡಿಕೇರಿ ತಾಲೂಕಿನಲ್ಲಿ 15 ಹಾಗೂ ಪೊನ್ನಂಪೇಟೆ ತಾಲೂಕಿನಲ್ಲಿ 9 ಕೆರೆಗಳು ಅತಿಕ್ರಮಣಗೊಂಡಿವೆ.
ಕೆರೆಗಳ ಮಹತ್ವ ಅರಿತುಕೊಂಡಿರುವ ಸರ್ಕಾರ ಇತ್ತೀಚಿನ ವರ್ಷಗಳಲ್ಲಿ ಕೆರೆಗಳ ಸಂರಕ್ಷಣೆ ಮತ್ತು ಪುನರುಜ್ಜೀವನ ಕಡೆಗೆ ಹೆಚ್ಚಿನ ಆದ್ಯತೆ ಕೊಡುತ್ತಿದೆ. ಈ ಹಿನ್ನೆಲೆಯಲ್ಲಿ ಕೆರೆಗಳ ಸರ್ವೇ ಕಾರ್ಯ ನಡೆಸಿದೆ. ಜಿಲ್ಲೆಯಲ್ಲಿರುವ 897 ಕೆರೆಗಳ ಪೈಕಿ 640 ಕರೆಗಳನ್ನು ಈಗಾಗಲೇ ಅಳತೆ ಮಾಡಿ ಮುಗಿಸಲಾಗಿದೆ. 257 ಕೆರೆಗಳು ಅಳತೆಗೆ ಬಾಕಿ ಇದೆ. ಈ ಸಂದರ್ಭದಲ್ಲಿ 114 ಕೆರೆಗಳು ಒತ್ತುವರಿ ಆಗಿರುವುದು ಕಂಡುಬAದಿದೆ. ಇದರಲ್ಲಿ 70 ಕೆರೆಗಳ ಒತ್ತುವರಿ ತೆರವು ಮಾಡಲಾಗಿದ್ದು, ಇನ್ನೂ 44 ಕೆರೆಗಳು ಒತ್ತುವರಿದಾರರ ಹಿಡಿತದಲ್ಲಿ ಇದೆ.
ಸಣ್ಣ ನೀರಾವರಿ ಇಲಾಖೆ ಮೂಲಕ ಕೆರೆಗಳ ಅಭಿವೃದ್ಧಿ ಕಾರ್ಯಗಳನ್ನೂ ಕೈಗೆತ್ತಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಜಿಲ್ಲೆಯಲ್ಲಿ 2021-22ನೇ ಸಾಲಿಗೆ 1 ಕೆರೆಯನ್ನು ಗುರುತಿಸಲಾಗಿದ್ದು, 50 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಮಾಡಲಾಗಿದೆ. 2022-23ನೇ ಸಾಲಿನಲ್ಲಿ 23 ಕೆರೆಗಳನ್ನು ಗುರುತಿಸಲಾಗಿದ್ದು, 5.5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕೆಲಸ ಪೂರೈಸಲಾಗಿದೆ. 2023-24ನೇ ಸಾಲಿನಲ್ಲಿ 5 ಕೆರೆಗಳನ್ನು 6 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, 2 ಕೆರೆಗಳ ಕಾಮಗಾರಿ ಮುಗಿದಿದೆ. 3 ಕೆರೆಗಳ ಅಭಿವೃದ್ಧಿ ಕೆಲಸ ಇನ್ನಷ್ಟೇ ಆಗಬೇಕಿದೆ.
ಜಿಲ್ಲೆಯಲ್ಲಿ ಕೆರೆಗಳ ಸಂಖ್ಯೆ ಕೇವಲ ದಾಖಲೆಗಳಲ್ಲಿ ಮಾತ್ರ ಕಾಣುವಂತ ಪರಿಸ್ಥಿತಿ ನಿರ್ಮಾಣ ಆಗಿದೆ. ಬಹುತೇಕ ಕೆರೆಗಳು ಒತ್ತುವರಿ ಆಗಿದ್ದು, ದೊಡ್ಡ, ದೊಡ್ಡ ಕಟ್ಟಡಗಳು ತಲೆ ಎತ್ತಿವೆ. ಕೆಲವು ಕೆರೆಗಳ ದಾಖಲೆಗಳೂ ಖಾಸಗಿ ವ್ಯಕ್ತಿಗಳ ಪರ ಆಗಿದೆ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅತಿಕ್ರಮಣ ಆಗಿರುವ ಕೆರೆಗಳನ್ನು ಬಿಡಿಸಬೇಕು. ನೀರಿನ ಮೂಲಗಳನ್ನು ಸಂರಕ್ಷಿಸಬೇಕು.
ಹೆಚ್.ಎಸ್. ಅಶೋಕ, ಮಾಜಿ ಅಧ್ಯಕ್ಷ, ಕೊಡಗು ಜಿ.ಪಂ.
ಕೊಡಗು ಸೇರಿದಂತೆ ಮಲೆನಾಡಿನ ಸಣ್ಣ ಸಣ್ಣ ಅಧಿಕೃತ ಕೆರೆಗಳನ್ನು ಉಸ್ತುವಾರಿ ಇಲಾಖೆಗಳ ಸಹಯೋಗದೊಂದಿಗೆ ಕಂದಾಯ ಇಲಾಖೆಯಿಂದ ಸರ್ವೇ ಮಾಡಿಸಲಾಗಿರುತ್ತದೆ. ಕೆರೆಯ ಅತಿಕ್ರಮಣಗಳನ್ನು ತೆರವುಗೊಳಿಸಲು ಕೈಗೊಳ್ಳಲಾಗಿದೆ. ಕೆರೆಗಳ ಪುನಃಶ್ವೇತನ ಕಾಮಗಾರಿಗಳನ್ನು ಸಂಬAಧಿಸಿದ ಕೆರೆಯ ಉಸ್ತುವಾರಿ ಇಲಾಖೆಗಳು ಆಯಾ ಇಲಾಖೆಗಳಿಗೆ ಲಭ್ಯವಾಗುವ ಅನುದಾನದಲ್ಲಿ ಅನುಗುಣವಾಗಿ ಕೈಗೊಳ್ಳುತ್ತಿರುತ್ತವೆ.
ಎನ್.ಎಸ್. ಬೋಸರಾಜು, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ