ಹೆಚ್ಚುತ್ತಿರುವ ಗಾಂಜಾ ಘಾಟು

22 web.jpg 1
Published on

ಮುಳಬಾಗಿಲಿನಲ್ಲಿ ಶಾಸಕ ಸಮೃದ್ಧಿ ವಿ.ಮಂಜುನಾಥ್​ ಬೇಸರ


ಮುಳಬಾಗಿಲು: ತಾಲೂಕಿನಲ್ಲಿ ಗಾಂಜಾ ಘಾಟು ಎಗ್ಗಿಲ್ಲದೆ ಲಭ್ಯವಾಗುತ್ತಿದೆ. ಯುವ ಸಮೂಹ ಈ ಜಾಲದ ಬಲೆಯಲ್ಲಿ ಸಿಲುಕುತ್ತಿರುವುದರಿಂದ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ತಕ್ಷಣವೇ ಗಾಂಜಾ ಮಾರಾಟ ತಡೆಗೆ ಎಲ್ಲರೂ ಮುಂದಾಗುವ ಮೂಲಕ ಸುಶಿತ ಪ್ರದೇಶವನ್ನಾಗಿಸಬೇಕು ಎಂದು ಶಾಸಕ ಸಮೃದ್ಧಿ ವಿ.ಮಂಜುನಾಥ್​ ಹೇಳಿದರು.ನಗರದ ನೇತಾಜಿ ಕ್ರೀಡಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಸಮಾಜಘಾತುಕ ಶಕ್ತಿಗಳಿಂದಾಗುವ ಅಪರಾಧ ಚಟುವಟಿಕೆಗಳನ್ನು ತಡೆಯುವವಲ್ಲಿ ಶಿಕ್ಷಕರು ಮುಂದಾಗಬೇಕು ಎಂದು ಸಲಹೆ ನೀಡಿದರು.
ಶಿಕ್ಷಕರು ಹಲವು ಸಂಘಗಳನ್ನು ಮಾಡಿಕೊಂಡು ಒಗ್ಗಟ್ಟಿಲ್ಲದಿರುವುದು ಬೇಸರ ತರಿಸಿದೆ. ತಾಲೂಕಿನ ಗಡಿ ಪ್ರದೇಶದಲ್ಲಿ 86 ಶಾಲೆಗಳಿದ್ದು, ಕೆಲ ಶಾಲೆಗಳು ಮುಚ್ಚಲಾಗಿದೆ. ಶಾಲೆಗಳನ್ನು ಉಳಿಸುವ ಕೆಲಸ ಶಿಕ್ಷಕರಿಂದಾಗಬೇಕು. ಅದು ಬಿಟ್ಟು ನಾವು ವಿವಿಧ ಸಂಘಗಳ ಪದಾಧಿಕಾರಿಗಳೆಂದು ಹೇಳಿಕೊಂಡು ವೇದಿಕೆಗಳಲ್ಲಿ ಕಾಣಿಸಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಜಿಲ್ಲಾಧಿಕಾರಿ ಅಕ್ರಂಪಾಷಾ ಮಾತನಾಡಿ, ಶಿಕ್ಷಕ ವೃತ್ತಿ ಸಂತಸದಾಯಕವಾದ ವೃತ್ತಿಯಾಗಿದೆ. ನಾನು ಸಹ ಶಿಕ್ಷಕನಾಗಿ ಎಂಟು ವರ್ಷಗಳವರೆಗೆ ಕಾರ್ಯ ನಿರ್ವಹಿಸಿದ್ದೇನೆ. ಅದರಲ್ಲಿ ಬಹಳ ಸಂತಸವಿದೆ, ಉತ್ತಮ ಪಾಠ ಮಾಡಿದ ಶಿಕ್ಷಕರನ್ನು ಸಾಯುವವರೆಗೂ ನೆನಪಿಸಿಕೊಳ್ಳುತ್ತಾರೆ. ಶಿಕ್ಷಕರಾದ ನೀವು ನಿಮ್ಮ ವೃತ್ತಿಯನ್ನು ಗೌರವಿಸಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದಾಗ ನಿಮ್ಮ ಮಕ್ಕಳಿಗೂ ಒಳ್ಳೆಯದಾಗುತ್ತದೆ. ಈ ವೃತ್ತಿ ನೊಬೆಲ್​ ಪ್ರಶಸ್ತಿ ಇದ್ದಂತೆ, ಬದಲಾದ ಪರಿಸ್ಥಿತಿಯಲ್ಲೂ ವಿಧಾನಗಳನ್ನು ಬದಲಾಯಿಸಿಕೊಂಡು ಕಾರ್ಯನಿರ್ವಹಿಸಬೇಕು ಎಂದರು.
ನಾನು ಓದಿದ ಎಲ್ಲ ಶಾಲೆಗಳನ್ನು ದತ್ತು ಪಡೆದು ಸಿಎಸ್​ಆರ್​ ಹಣದಲ್ಲಿ ಅಭಿವೃದ್ಧಿಪಡಿಸಿದ್ದೇನೆ. ಶಿಕ್ಷಕರು ಮನಸ್ಸು ಮಾಡಿ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕೋಲಾರ ಜಿಲ್ಲೆಯನ್ನು 6ನೇ ಸ್ಥಾನಕ್ಕೆ ತರಬೇಕು. ಜಿಲ್ಲೆಯಲ್ಲಿ 1,953 ಶಾಲೆಗಳಿಗೆ ದಾಖಲೆಗಳು ಇರಲಿಲ್ಲ. ಈಗ 1,500 ಶಾಲೆಗಳಿಗೆ ಇ -ಸ್ವತ್ತು ಖಾತೆ ಮಾಡಿಕೊಡಲಾಗಿದೆ, ಉಳಿದ ಶಾಲೆಗಳಿಗೂ ಮಾಡಿಕೊಡಲಾಗುವುದು ಎಂದರು.

ವೇದಿಕೆಯಿಂದ ಹೊರನಡೆದ ಪದಾಧಿಕಾರಿಗಳು: ಶಾಸಕರ ಮಾತಿನಿಂದ ಬೇಸರಗೊಂಡ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ವೇದಿಕೆಯಿಂದ ಬೇಸರಗೊಂಡು ಹೊರ ನಡೆದರು. ನಂತರ ಶಾಸಕರು ಅಧ್ಯಕ್ಷ ಎಚ್​. ವೆಂಕಟಗಿರಿಯಪ್ಪ ಅವರನ್ನು ವೇದಿಕೆ ಇಳಿದು ಮಾತನಾಡಿಸಿ, ಏನೇ ಸಮಸ್ಯೆ ಇದ್ದರೂ ನಂತರ ಮಾತನಾಡೋಣ ಎಂದು ಹೇಳಿ ಕರೆತಂದ ಪ್ರಸಂಗ ನಡೆಯಿತು.

ಸೇವಾ ನಿವೃತ್ತಿ ಹೊಂದಿದ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರನ್ನು ಸನ್ಮಾನಿಸಲಾಯಿತು. ರೋಟರಿ ಅಧ್ಯಕ್ಷ ನಗವಾರ ಎನ್​.ಆರ್​.ಸತ್ಯಣ್ಣ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್​.ವೆಂಕಟಗಿರಿಯಪ್ಪ, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಎಂ.ಶಿವಣ್ಣ, ಜಿಲ್ಲಾ ಅನುದಾನಿತ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ನಾರಾಯಣಸ್ವಾಮಿ, ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಚಲಪತಿ, ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷೆ ನಾರಾಯಣಮ್ಮ, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್​ ಸದಸ್ಯ ಕೆ.ವಿ.ಜಗನ್ನಾಥ್​, ಎಸ್ಸಿ&ಎಸ್ಟಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಸಿ.ರಘುನಾಥ್​, ಭಾರತ ಸೇವಾದಳದ ತಾಲೂಕು ಅಧ್ಯಕ್ಷ ಬಿ.ಎಸ್​.ವೇಣುಗೋಪಾಲ್​, ಜಿಪಿಟಿ ಶಿಕ್ಷಕರ ಸಂಘದ ಅಧ್ಯಕ್ಷ ಶಿವಕುಮಾರ್​, ಉರ್ದು ಶಿಕ್ಷಕರ ಸಂಘದ ಅಧ್ಯಕ್ಷ ಫೈಜುಲ್ಲಾ, ಪ್ರೌಢಶಾಲಾ ಬಡ್ತಿ ಸಹ ಶಿಕ್ಷಕರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net