

ಗುಂಡ್ಲುಪೇಟೆ: ಅರಣ್ಯ ಇಲಾಖೆಯ ಬಫರ್ ವಲಯದ ಅರಣ್ಯ ಪ್ರದೇಶದಲ್ಲಿ ಮಾನವ ಚಟುವಟಿಕೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ಗ್ರಾಮಗಳಲ್ಲಿ ವನ್ಯಜೀವಿಗಳ ಹಾವಳಿ ಹೆಚ್ಚಾಗುತ್ತಿದೆ.
ಬಂಡೀಪುರ ಹುಲಿ ಯೋಜನೆಯ ಬಫರ್ ವಲಯ ವ್ಯಾಪ್ತಿಗೆ ತಾಲೂಕಿನ 52 ಗ್ರಾವಗಳು, ಸೆಕ್ಷನ್ 4ಗೆ ಸೇರಿದ 13,065 ಹೆಕ್ಟೇರ್ ವಿಸ್ತೀರ್ಣವಿರುವ ತೆರಕಣಾಂಬಿ ಗುಡ್ಡವೂ ಸೇರಿದೆ. ಒಬ್ಬರು ವಲಯಾರಣ್ಯಾಧಿಕಾರಿ, ಮೂವರು ಉಪ ವಲಯರಣ್ಯಾಧಿಕಾರಿ, ಎಂಟು ಗಾರ್ಡ್‌ಗಳು ಹಾಗೂ ಕೆಲವು ದಿನಗೂಲಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರ್ಷದ ಹಿಂದೆ ಈ ವಲಯದ ಆರ್‌ಎಫ್‌ಒ ವರ್ಗಾವಣೆ ಆದ ನಂತರ ಎಸ್‌ಟಿಪಿಎಫ್‌ನ ಆರ್‌ಎಫ್‌ಒ ಪ್ರಭಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಸಿಬ್ಬಂದಿ ಕೊರತೆ, ಸಮರ್ಪಕ ಬೀಟ್ ಮಾಡದ ಪರಿಣಾಮ ಬೆಟ್ಟಗುಡ್ಡಗಳು ಬಯಲು ಬಾರ್‌ಗಳಾಗಿ ಪರಿವರ್ತನೆಯಾಗಿವೆ. ಸಂಜೆ ವೇಳೆ ಮರಗಳನ್ನು ಕತ್ತರಿಸಿ ಕೊಂಡೊಯ್ಯಲಾಗುತ್ತಿದೆ.
ಪಟ್ಟಣದ ಜಾಕೀರ್ ಹುಸೇನ್ ನಗರ ಸೇರಿದಂತೆ ತಾಲೂಕಿನ ಮಾದಾಪಟ್ಟಣ, ಬೆಟ್ಟದ ಮಾದಹಳ್ಳಿ, ರಾಘವಾಪುರ, ಮಡಹಳ್ಳಿ, ತ್ರಿಯಂಭಕಪುರ, ಕಗ್ಗಳ, ದೇಪಾಪುರ, ಶೀಲವಂತಪುರ, ಕೊಡಸೋಗೆ, ಬೊಮ್ಮಲಾಪುರ ಮುಂತಾದ ಗ್ರಾಮಗಳಲ್ಲಿ ಹುಲಿ ಹಾಗೂ ಚಿರತೆ ದಾಳಿಗೆ ನೂರಾರು ಜಾನುವಾರುಗಳು ಬಲಿಯಾಗಿವೆ. ಇತ್ತೀಚೆಗೆ ಲಕ್ಕೂರು ಗ್ರಾಮದ ಕಬ್ಬಿನ ಗದ್ದೆಯಲ್ಲಿ ಮೂರು ಮರಿ ಹಾಕಿದ ಚಿರತೆ ರಾತ್ರಿ ವೇಳೆ ತನ್ನ ಮರಿಗಳೊಂದಿಗೆ ಅತ್ತಿತ್ತ ಸಂಚರಿಸುತ್ತಿದ್ದು, ಸ್ಥಳೀಯರ ನೆಮ್ಮದಿ ಕೆಡಿಸಿದೆ. ಕಗ್ಗಳ ಗ್ರಾಮದ ಮಣಿಸ್ವಾಮಿ ಎಂಬುವರ ಜಮೀನಿನಲ್ಲಿ ಹತ್ತು ದಿನಗಳ ಹಿಂದೆ ಹುಲಿ ದಾಳಿಗೆ ಕರು ಬಲಿಯಾಗಿತ್ತು.
ಮರುದಿನವೇ ಸೆಕ್ಷನ್ 4 ಗೆ ಸೇರಿದ ಗುಡ್ಡದ ತಪ್ಪಲಿನಲ್ಲಿರುವ ಕಗ್ಗಳದಹುಂಡಿ ಗ್ರಾಮದ ಮುಜೀಬ್ ಎಂಬುವರ ಜಮೀನಿನಲ್ಲಿ ಮೇಯುತ್ತಿದ್ದ ಹಸುವನ್ನೂ ಕೊಂದು ಹಾಕಿತ್ತು. ಮರುದಿನ ಮಲ್ಲಮ್ಮನಹುಂಡಿ ಗ್ರಾಮದ ಗುರುಸಿದ್ದಪ್ಪ ಎಂಬುವರ ಮೂರು ಹಸುಗಳು ಬಲಿಯಾಗಿದ್ದವು.
ಬಯಲು ಬಾರ್‌ಗಳಾದ ಪುಣ್ಯಕ್ಷೇತ್ರಗಳು: ತೆರಕಣಾಂಬಿ ಸೆಕ್ಷನ್ 4ಗೆ ಸೇರಿದ ಗುಡ್ಡದ ಮೇಲಿರುವ ಪುಣ್ಯಕ್ಷೇತ್ರಗಳಾದ ಸ್ಕಂದಗಿರಿ ಪಾರ್ವತಾಂಬಾ ಬೆಟ್ಟ ಹಾಗೂ ಗದ್ದುಗಲ್ ದೇವಾಲಯ ಸುತ್ತ ಅನೈತಿಕ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿದೆ. ಅಗಸ್ತ್ಯ ಮುನಿಗಳಿಂದ ಪ್ರತಿಷ್ಠಾಪಿತವಾದ ಶಿವಲಿಂಗವಿರುವ ಸ್ಕಂದಗಿರಿ ಪಾರ್ವತಾಂಬಾ ಬೆಟ್ಟಕ್ಕೆ ಪೌರಾಣಿಕ ಹಿನ್ನೆಲೆ ಇದೆ.
ಇಲ್ಲಿ ಪ್ರತಿ ದಿನವೂ ಪೂಜೆ ನಡೆಯಲಿದ್ದು, ನೆರೆಯ ತಾಲೂಕುಗಳ ಭಕ್ತರೂ ಆಗಮಿಸಿ ಪೂಜೆ ಸಲ್ಲಿಸವ ವಾಡಿಕೆ ಇದೆ. ಪುಣ್ಯ ಕ್ಷೇತ್ರವಾಗಿರುವ ಹಿನ್ನೆಲೆಯಲ್ಲಿ ಇಲ್ಲಿ ಮದುವೆ, ನಾಮಕರಣ ಮುಂತಾದ ಶುಭಕಾರ್ಯಗಳು ನೆರವೇರುತ್ತವೆ. ಇದರ ಸಮೀಪ ಎತ್ತರ ಪ್ರದೇಶದ ಮೇಲಿನ ಗದ್ದುಗಲ್ ಬೆಟ್ಟ ಎಂದು ಕರೆಯಲಾಗುವ ಗುಹೆಯಲ್ಲಿ ಪವಾಡ ಪುರುಷರಾದ ಸಿದ್ದಪ್ಪಾಜಿ ಹಾಗೂ ರಾಚಪ್ಪಾಜಿ ತಪಸ್ಸು ಮಾಡಿದ್ದರು ಎಂಬ ನಂಬಿಕೆ ಭಕ್ತರದ್ದು. ಪ್ರತಿ ಸೋಮವಾರ ಹಾಗೂ ಶುಕ್ರವಾರ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಲಿದೆ. ಸುತ್ತಮುತ್ತಲಿನ ಕಂದೇಗಾಲ, ಶಿಂಡನಪುರ, ಮೊಳ್ಳಯ್ಯನಹುಂಡಿ, ಬೆಟ್ಟಹಳ್ಳಿ, ಹೊಸೂರು, ಕೊಡಸೋಗೆ, ಸೋಮನಪುರ ಶೀಲವಂತಪುರ ಮುಂತಾದ ಗ್ರಾಮಗಳ ಸಿದ್ದಪ್ಪಾಜಿ ಗುಡ್ಡರು ಇಲ್ಲಿಗೆ ಬಂದು ಸೇವೆ ಸಲ್ಲಿಸುವುದು ವಾಡಿಕೆ.
ಪಟ್ಟಣದಿಂದ 15 ಕಿಮೀ ಅಂತರದಲ್ಲಿರುವ ಈ ಗುಡ್ಡಗಳಲ್ಲಿ ನಿತ್ಯ ಮೋಜು ಮಸ್ತಿ ಹಾಗೂ ಜೂಜಾಟ ಹೆಚ್ಚಾಗುತ್ತಿದೆ. ಬೆಳಗ್ಗೆ ಆಟೋ, ಬೈಕ್, ಕಾರುಗಳಲ್ಲಿ ಬರುವ ಯುವಕರು ಗುಂಪು ಮರಗಳ ನೆರಳಿನಲ್ಲಿ ಮಾಂಸಾಹಾರ ಸಿದ್ಧಪಡಿಸಿ ಮದ್ಯಪಾನ ಮಾಡುತ್ತಾರೆ. ಗಾಜಿನ ಬಾಟಲಿಗಳನ್ನು ಒಡೆಯುವುದು, ಮದ್ಯದ ಪೌಚುಗಳು, ಪ್ಲಾಸ್ಟಿಕ್ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಿದ್ದಾರೆ. ಪರಿಣಾಮ ದೇವಸ್ಥಾನದ ದಾರಿಯುದ್ದಕ್ಕೂ ಟನ್‌ಗಟ್ಟಲೆ ತ್ಯಾಜ್ಯದ ರಾಶಿ ಕಾಣಸಿಗುತ್ತದೆ. ಮಳೆಗಾಲದಲ್ಲಿ ನೀರು ಹರಿಯುತ್ತಿದ್ದ ಹಳ್ಳಕೊಳ್ಳಗಳೂ ಮುಚ್ಚಿಹೋಗಿವೆ. ತ್ಯಾಜ್ಯ ತಿಂದ ಪ್ರಾಣಿಗಳು ಮೃತಪಡುತ್ತಿವೆ.
ಇನ್ನಾದರೂ ಅರಣ್ಯ ಅಥವಾ ಪೊಲೀಸ್ ಇಲಾಖೆ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಿ, ರಾಶಿಯಾಗಿ ಹರಡಿರುವ ಪ್ಲಾಸ್ಟಿಕ್ ತೆರವುಗೊಳಿಸುವ ಮೂಲಕ ದೇವಾಲಯದ ಪಾವಿತ್ರೃತೆಯನ್ನು ಕಾಪಾಡಲಿ ಎಂಬುದು ಸ್ಥಳೀಯರ ಆಗ್ರಹ.
ತಾಲೂಕಿನಲ್ಲಿ ಹರಿಯುತ್ತಿದ್ದ ಗುಂಡ್ಲು ನದಿಗೆ ಗೋಪಾಲಸ್ವಾಮಿ ಬೆಟ್ಟವು ಒಂದು ಜಲಮೂಲವಾಗಿದ್ದರೆ, ಸೆಕ್ಷನ್ 4 ಗುಡ್ಡವೂ ಮತ್ತೊಂದು ಪ್ರಮುಖ ಮೂಲವಾಗಿದೆ. ಸ್ಕಂದಗಿರಿ ಪಾರ್ವತಾಂಬಾ ಬೆಟ್ಟಕ್ಕೆ ಬಿದ್ದ ಮಳೆನೀರು ಹತ್ತಾರು ಕಾಲುವೆಗಳ ಮೂಲಕ ಗುಂಡ್ಲು ನದಿ ಸೇರುತ್ತಿದೆ. ಅರಣ್ಯ ಇಲಾಖೆ ಹುಲಿ ಗಣತಿ ಸಂದರ್ಭದಲ್ಲಿ ಈ ಭಾಗದಲ್ಲಿ ಅಳವಡಿಸಿದ್ದ ಕ್ಯಾಮರಾದಲ್ಲಿ ಎರಡು ಹುಲಿ ಹಾಗೂ ನಾಲ್ಕಾರು ಚಿರತೆಗಳು ಸಂಚರಿಸುತ್ತಿರುವುದು ಸೆರೆಯಾಗಿದೆ.
*ಮೋಜು-ಮಸ್ತಿ ಹಾಗೂ ಜೂಜಾಡಲು ಬರುವವರಿಂದ ದೇವಾಲಯದ ಪಾವಿತ್ರೃ ಹಾಳಾಗುತ್ತಿದೆ. ಮಹಿಳೆಯರು ದೇವಾಲಯಕ್ಕೆ ಹೋಗಲು ಭಯಪಡುತ್ತಿದ್ದಾರೆ. ಜಾನುವಾರುಗಳು ಹಾಗೂ ವನ್ಯಜೀವಿಗಳು ಪ್ಲಾಸ್ಟಿಕ್ ತಿಂದು ಅಸ್ವಸ್ಥಗೊಳ್ಳುತ್ತಿವೆ. ನಿರ್ಜನ ಪ್ರದೇಶದಲ್ಲಿರುವ ಗುಡ್ಡದಲ್ಲಿ ಮರಗಳ್ಳತನ ನಿರಂತರವಾಗಿ ನಡೆಯುತ್ತಿದ್ದು, ಆಟೋಗಳಲ್ಲಿ ಬರುವ ಮರಗಳ್ಳರು ಯಾಂತ್ರಿಕ ಗರಗಸದಿಂದ ಮರಗಳನ್ನು ಕತ್ತರಿಸುತ್ತಿದ್ದರೂ ಅರಣ್ಯ ಇಲಾಖೆ ಇತ್ತ ತಲೆ ಹಾಕುತ್ತಿಲ್ಲ.
ಶಂಕರಪ್ಪ ಕಂದೇಗಾಲ ಗ್ರಾಮಸ್ಥ
ಈ ಗುಡ್ಡದ ಉಸ್ತುವಾರಿಗೆ ನೇಮಿಸಿದ್ದ ಉಪ ವಲಯಾರಣ್ಯಾಧಿಕಾರಿಯನ್ನು ಬದಲಾಯಿಸುವುದರ ಜತೆಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗುವುದು.
ಡಾ.ಸಿರಮೆಶ್ ಕುಮಾರ್, ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ