ಹೆಚ್ಚಿದ ತಾಪಮಾನ, ಮುಂಜಾಗ್ರತೆವಹಿಸಿ

heatwave-in-odisha-1
Published on

ರಾಯಚೂರು: ಜಿಲ್ಲೆಯಲ್ಲಿ ಬಿಸಿಲ ತಾಪಮಾನ ಹೆಚ್ಚುತ್ತಿದ್ದು, ಹೀಟ್‌ವೇವ್ ಸ್ಟ್ರೋಕ್‌ದಿಂದಾಗಿ ಕಾರ್ಮಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದ್ದು, ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು. ಜಿಲ್ಲಾಡಳಿತ ಕೆಲ ಸಲಹೆಗಳನ್ನು ನೀಡಿದ್ದು, ಪಾಲಿಸಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಡಿಸಿ ಕೆ.ನಿತೀಶ್ ತಿಳಿಸಿದ್ದಾರೆ.

ಕೆಲಸದ ಸ್ಥಳದಲ್ಲಿ ಕಾರ್ಮಿಕರಿಗೆ ಮಾಲೀಕರು ತಂಪಾದ ಕುಡಿವ ನೀರು ಮತ್ತು ಎಲೆಕ್ಕೋಲೈಟ್ ಪೂರಕಗಳ ವ್ಯವಸ್ಥೆ ಮಾಡಬೇಕು. ಡಿ-ಹೈಡ್ರೇಷನ್ ಆಗದಿರಲು ಪ್ರತಿ 20 ನಿಮಿಷಕ್ಕೊಮ್ಮೆ ನೀರು ಕುಡಿಯಬೇಕು. ಕೆಲಸದ ಮಧ್ಯೆದಲ್ಲಿ ವಿಶ್ರಾಂತಿ, ಕಾರ್ಮಿಕರು ಬೆಳಿಗ್ಗೆ 11 ರಿಂದ ಸಂಜೆ 4ರವರೆಗೆ ಬಿಸಿಲಿನಲ್ಲಿ ಕೆಲಸ ನಿರ್ವಹಿಸದಂತೆ ಮಾಲೀಕರು ಎಚ್ಚರ ವಹಿಸಬೇಕು. ಸಾಧ್ಯವಾದಲ್ಲಿ ಬೃಹತ್ ಕಟ್ಟಡ ಮತ್ತು ಇತರೆ ನಿರ್ಮಾಣದಾರರು ರಾತ್ರಿ ವೇಳೆ ಕೆಲಸ ಮಾಡಬಹುದು.

ಹೆಚ್ಚು ಬಿಸಿಲಿನ ಸಮಯದಲ್ಲಿ ನೆರಳಿನ ವ್ಯವಸ್ಥೆ, ಗಾಳಿ ಬೆಳಕು ಮತ್ತು ಕುಡಿಯುವ ನೀರಿನ ವ್ಯವಸ್ಥೆಯೊಂದಿಗೆ ತಾತ್ಕಾಲಿಕ ಶೆಡ್ ನಿರ್ಮಿಸಬೇಕು. ಆರೋಗ್ಯ ಇಲಾಖೆ ನೀಡಿರುವ ಸಲಹೆಗಳನ್ನು ಅನುಸರಿಸಬೇಕು. ಅಲ್ಲದೆ ಹತ್ತಿಯ ಮತ್ತು ಶ್ವೇತ ವರ್ಣದ ತುಂಬು ತೋಳಿನ ಅಂಗಿ/ಬಟ್ಟೆ ಮತ್ತು ಟೋಪಿ, ಕೂಲಿಂಗ್ ಗ್ಲಸ್ ಧರಿಸುವುದು, ಒಳಾಂಗಣದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಂಬಂಧಿಸಿದಂತೆ ಕೊಠಡಿಯ ತಾಪಮಾನ ಕಡಿಮೆ ಮಾಡಲು ಸೂಕ್ತ ಕ್ರಮ ಮಾಲೀಕರು ತೆಗೆದುಕೊಳ್ಳುವುದು.

ಹೀಟ್‌ವೇವ್ ಸ್ಟ್ರೋಕ್ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಯನ್ನು ತಂಪಾದ ಜಾಗಕ್ಕೆ ಸ್ಥಳಾಂತರಿಸಿ ಕನಿಷ್ಠ ಬಟ್ಟೆ ಹೊಂದಿರುವಂತೆ ನೋಡಿಕೊಂಡು ತಣ್ಣೀರಿನಿಂದ ಸ್ಪಾಂಜ್ ಮಾಡಬೇಕೆಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net