

-ಭರತ್ ಶೆಟ್ಟಿಗಾರ್ ಮಂಗಳೂರು
ಚಾರಣವೆಂದರೆ ನೆನಪಾಗುವುದು ಹಚ್ಚ ಹಸಿರಿನ ಪಶ್ಚಿಮ ಘಟ್ಟದ ಸಾಲುಗಳು, ಪರ್ವತಗಳು. ವರ್ಷದಲ್ಲಿ ಗರಿಷ್ಠ ಆರು ತಿಂಗಳು ಮಳೆ ಬೀಳುವ ಘಟ್ಟ ಪ್ರದೇಶಗಳಲ್ಲಿ, ಇತ್ತೀಚಿನ ಕೆಲವು ವರ್ಷಗಳಿಂದ ಆಘಾತಕಾರಿ ಬದಲಾವಣೆಗಳು ಆಗುತ್ತಿದ್ದು, ಇದು ಚಾರಣ ಪ್ರಿಯರನ್ನು ಆತಂಕದ ಜತೆಗೆ ಬಸವಳಿಯುವಂತೆ ಮಾಡಿದೆ.
ನಾಲ್ಕು ವರ್ಷಗಳಿಂದ ಈಚೆಗೆ ಮಳೆಗಾಲದ ಅಬ್ಬರದ ಮಳೆ ಕಡಿಮೆಯಾಗುತ್ತಿದ್ದಂತೆ ಘಟ್ಟದಲ್ಲಿ ತಾಪಮಾನದಲ್ಲಿ ಏರಿಕೆಯಾಗುತ್ತಿದ್ದು, ಬಿಸಿಲ ಝಳ ಹೆಚ್ಚುತ್ತಿದೆ. ಈ ಬಾರಿಯೂ ಚಾರಣಿಗರಿಗೆ ಈ ಅನುಭವವಾಗಿದೆ. ಕಾಡಿನೊಳಗೂ ಸೇರಿದಂತೆ ಬೆಟ್ಟದ ತುದಿಯಲ್ಲಿ ಪ್ರಸ್ತುತ 30ರಿಂದ 32 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ಪ್ರತಿದಿನ ತಾಪಮಾನ ದಾಖಲಾಗುತ್ತಿದೆ. ಇದು ಮಂಗಳೂರು ನಗರದಲ್ಲಿ ದಾಖಲಾಗುತ್ತಿರುವ ಗರಿಷ್ಠ ಉಷ್ಣಾಂಶಕ್ಕೆ ಸಮ.
ಹಚ್ಚ ಹಸುರಿನಿಂದ ಕೂಡಿದ ನಿತ್ಯಹರಿದ್ವರ್ಣ ಕಾಡು ಪ್ರದೇಶ ಮತ್ತು ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿರುವುರಿಂದ ಘಟ್ಟ ಪ್ರದೇಶದಲ್ಲಿ ಕಡಿಮೆ ತಾಪಮಾನ ದಾಖಲಾಗಬೇಕು. ಹೊರಗಡೆ ಎಷ್ಟೇ ಬಿಸಿಲಿದ್ದರೂ ಕಾಡಿನೊಳಗೆ ವಾತಾವರಣ ತಂಪಾಗಿರುತ್ತದೆ. ಆದರೆ ಈಗೀಗ ಘಟ್ಟದ ತಪ್ಪಲು ಪ್ರದೇಶದಲ್ಲೂ ತಾಪಮಾನದಲ್ಲಿ ಏರಿಕೆ ಕಂಡುಬರುತ್ತಿದೆ. ಈಗಲೇ ಈ ಪ್ರಮಾಣದ ಏರಿಕೆ ಗಮನಿಸಿದಾಗ ಬೇಸಿಗೆಯಲ್ಲಿ ಇನ್ನಷ್ಟು ಹೆಚ್ಚುವ ಸಾಧ್ಯತೆ ದಟ್ಟವಾಗಿದೆ.
ಘಟ್ಟದ ಮೇಲೆ ಮಾನವ ಪ್ರಹಾರ ಕಾರಣ?: ಇತ್ತೀಚಿನ ವರ್ಷಗಳಲ್ಲಿ ಘಟ್ಟದ ಮೇಲೆ ಮಾನವನ ಪ್ರಹಾರ ಹೆಚ್ಚಾಗಿದೆ. ಅಭಿವೃದ್ಧಿ, ಪ್ರವಾಸೋದ್ಯಮ ಹೆಸರಿನಲ್ಲಿ ಕಾಡು ನಾಶ ಮಾಡಲಾಗುತ್ತಿದೆ. ಹೋಮ್‌ಸ್ಟೇಗಳು, ಅಣೆಕಟ್ಟುಗಳು, ರಸ್ತೆ, ಸುರಂಗ ಮಾರ್ಗ ನಿರ್ಮಾಣ ಯೋಜನೆಯನ್ನೂ ಸೇರಿಸಲಾಗಿದೆ. ಇದರ ಪರಿಣಾಮ ಪ್ರತಿ ಮಳೆಗಾಲದಲ್ಲಿ ಭೂ ಕುಸಿತ ಉಂಟಾಗುತ್ತಿದೆ. ಬೃಹತ್ ಮರಗಳು ಬುಡ ಸಹಿತ ನೆಲಕ್ಕುರುಳಿ, ನೀರು-ಮಣ್ಣಿನೊಂದಿಗೆ ಕೊಚ್ಚಿ ಹೋಗುತ್ತಿವೆ. ಭೂ ಕುಸಿತದ ಸ್ಥಳಕ್ಕೆ ಸೂರ್ಯನ ಬಿಸಿಲು ಬಿದ್ದಾಗ ನೆಲ ಬಿಸಿಯಾಗುತ್ತದೆ. ಇದರಿಂದ ತಾಪಮಾನ ಹೆಚ್ಚಾಗುತ್ತದೆ. ಜತೆಗೆ ಜಾಗತಿಕ ತಾಪಮಾನ ಏರಿಕೆಯಾಗುತ್ತಿರುವುದೂ, ಫಟ್ಟದಲ್ಲಿ ಸೆಕೆ ಹೆಚ್ಚಳಕ್ಕೆ ಕಾರಣವಾಗಿದೆ.
ಜೀವ ವೈವಿಧ್ಯ ಮೇಲೆ ಪರಿಣಾಮ: ಸೆಕೆ ಹೆಚ್ಚಾಗುತ್ತಿರುವುದು ಪಶ್ಚಿಮ ಘಟ್ಟದ ಜೀವ ವೈವಿಧ್ಯದ ಮೇಲೆಯೂ ಪರಿಣಾಮ ಬೀರಲಿದೆ. ಶೋಲಾ ಹುಲ್ಲುಗಾವಲು ಬಿಸಿಲ ಹೊಡೆತದಿಂದ ಬೇಗ ಒಣಗುವ ಸಾಧ್ಯತೆಯಿದೆ. ಕಾಡಿನಲ್ಲಿ ನೀರಿನ ಹರಿಯುವಿಕೆ ಕಡಿಮೆಯಾಗಿ ತೊರೆಗಳು, ಜಲಪಾತಗಳು ಬತ್ತಿ ಹೋಗಬಹುದು. ಇನ್ನೊಂದೆಡೆ, ಪ್ರಾಣಿಗಳು ನೀರು-ಆಹಾರ ಅರಸುತ್ತ ನಾಡಿಗೆ ಬಂದು ಬೆಳೆ ನಾಶ ಮಾಡುವುದು ಖಚಿತ. ಕಾಡೊಳಗೆ ಅಕ್ರಮವಾಗಿ ಪ್ರವೇಶಿಸುವ ಬೇಟೆಗಾರರು ಹಾಕುವ ಬೆಂಕಿಯೂ ಒಣ ಹುಲ್ಲುಗಾವಲನ್ನು ನಾಶ ಮಾಡುವ ಜತೆಗೆ ಜೀವ-ಜಂತುಗಳ ಪ್ರಾಣಕ್ಕೆ ಮಾರಕವಾಗಲಿವೆ ಎನ್ನುವುದು ಪರಿಸರ ಪ್ರೇಮಿಗಳ ಅಭಿಪ್ರಾಯ.
ನಾಲ್ಕು ವರ್ಷಗಳಿಂದ ಪಶ್ಚಿಮ ಘಟ್ಟದ ಬೆಟ್ಟಗಳಲ್ಲಿ ಸೆಕೆ ಹೆಚ್ಚಾಗಿದೆ. ಘಟ್ಟಕ್ಕೆ ಮನುಷ್ಯ ನೀಡಿರುವ ಹೊಡೆತಗಳ ಪರಿಣಾಮವಿದು. ನದಿಗಳಲ್ಲೂ ನೀರಿನ ಹರಿಯುವಿಕೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಇದು ಆತಂಕಕಾರಿ ಬೆಳವಣಿಗೆ. ತಂಪಾದ ಪ್ರದೇಶ ಎಂದು ಚಾರಣಕ್ಕೆ ಹೋದರೆ ಬಿಸಿಲ ಹೊಡೆತದಿಂದ ತತ್ತರಿಸುವಂತಾಗಿದೆ. -ದಿನೇಶ್ ಹೊಳ್ಳ, ಪರಿಸರ ಪ್ರೇಮಿ, ಚಾರಣಿಗ