

ಚಿಕ್ಕಬಳ್ಳಾಪುರ: ಆರೋಗ್ಯದ ಕಡೆಗಣನೆ ಮತ್ತು ದುಶ್ಚಟಗಳಿಂದ ಮಾರಕ ರೋಗಗಳಿಗೆ ತುತ್ತಾಗುವಿಕೆಯು ಹೆಚ್ಚಾಗುತ್ತಿದೆ ಎಂದು ಶಾಂತಾ ಸಂಸ್ಥೆಯ ಪ್ರಾಂಶುಪಾಲ ನವೀನ್ ಸೈಮನ್ ಬೇಸರಿಸಿದರು. ತಾಲೂಕಿನ ಪೆರೇಸಂದ್ರದ ಶಾಂತಾ ವಿದ್ಯಾಸಂಸ್ಥೆಯಲ್ಲಿ ಶ್ವಾಸಕೋಶ ಕ್ಯಾನ್ಸರ್ ಅರಿವಿನ ದಿನದ ಅಂಗವಾಗಿ ಶುಕ್ರವಾರ ಕೈಗೊಂಡಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ದುಶ್ಚಟಗಳಿಂದ ಮುಕ್ತರಾಗಿ ಒಳ್ಳೆಯ ಹವ್ಯಾಸ, ಉತ್ತಮ ಪರಿಸರದಲ್ಲಿ ಜೀವನ ನಡೆಸುವುದರಿಂದ ಶ್ವಾಸಕೋಶದ ಕ್ಯಾನ್ಸರ್ ರೋಗ ಹರಡುವುದನ್ನು ನಿಯಂತ್ರಿಸಬಹುದು ಎಂದರು. ದೇಹದಲ್ಲಿನ ಶ್ವಾಸಕೋಶಗಳು ಉಸಿರಾಟ ಕ್ರಿಯೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇದಕ್ಕೆ ಗುಣಮಟ್ಟದ ಗಾಳಿಯ ಅಗತ್ಯವಿದೆ. ಆದರೆ, ಮಾಲಿನ್ಯದ ವಾತಾವರಣ, ತಂಬಾಕು ಮತ್ತು ಧೂಮಪಾನದಿಂದ ಆರೋಗ್ಯವನ್ನು ಕೆಡಿಸಿಕೊಳ್ಳಲಾಗುತ್ತಿದೆ ಎಂದರು. ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಗೋಪಿನಾಥ್ ಮಾತನಾಡಿ, ಜೀವನದಲ್ಲಿ ಧೂಮಪಾನ ಕಲಿಯಲೇ ಕೂಡದು, ಈಗಾಗಲೇ ಧೂಮಪಾನಿಗಳಾಗಿದ್ದರೆ, ಈ ಕ್ಷಣದಿಂದಲೇ ಬಿಡಬೇಕು. ವಾಯು ಮಾಲಿನ್ಯದ ವಾತಾವರಣದಿಂದ ದೂರವಿರಬೇಕು. ಕಡ್ಡಾಯವಾಗಿ ಕ್ಯಾನ್ಸರ್ ನಿಮೂರ್ಲನಾ ರಾಷ್ಟ್ರೀಯ ಮಾರ್ಗಸೂಚಿಯನ್ನು ಪಾಲಿಸಬೇಕು. ಪ್ರಸ್ತುತ ಶೇ.80- ಜನರು ಧೂಮಪಾನದಿಂದಲೇ ಶ್ವಾಸಕೋಶಗಳ ಕ್ಯಾನ್ಸರ್ಗೆ ಬಲಿಯಾಗುತ್ತಿರುವುದು ಗೊತ್ತಾಗಿದೆ ಎಂದರು. ಕಾಲೇಜಿನ ಉಸಿರಾಟ ಚಿಕಿತ್ಸೆ ವಿಭಾಗದ ತರಬೇತಿ ವಿರ್ದ್ಯಾಥಿಗಳು ಪೆರೇಸಂದ್ರದ ಮುಖ್ಯ ಬೀದಿಯಲ್ಲಿ ಶ್ವಾಸಕೋಶ ಕ್ಯಾನ್ಸರ್ ಬಗ್ಗೆ ಅರಿವಿನ ಫಲಕಗಳನ್ನು ಪ್ರದರ್ಶಿಸಿ, ಜಾಥಾ ನಡೆಸಿದರು. ಕಾರ್ಯಕ್ರಮದಲ್ಲಿ ಗೋಡೆ ಪತ್ರಗಳ ರಚನೆಯ ಸ್ಪರ್ಧೆಯನ್ನು ಕೈಗೊಳ್ಳಲಾಗಿತ್ತು. ಶಾಂತಾ ಶಿಕ್ಷಣ ಸಂಸ್ಥೆಯ ನಿರ್ದೇಶಕ ಪ್ರೊ ಕೋಡಿರಂಗಪ್ಪ, ಬೋಧಕರಾದ ಸರಿತ್, ಡಯಾನ, ರಾಜೇಶ್ ಶುಕ್ಲಾ, ಜಾಹಿದ್, ರೇವತಿ, ಸುಭಿಕ್ಷ, ಪವಿತ್ರ, ಜೀವ ಮತ್ತಿತರರು ಇದ್ದರು.