ಹೆಚ್ಚಿದ ಒತ್ತಡ, ಅನಾಹುತಗಳಿಗೆ ದಾರಿ

FotoJet (1)
Published on

ವಿಎಗಳ ಆತಂಕ | ತಾಂತ್ರಿಕ ಸಿಬ್ಬಂದಿ ಸಮನಾದ ವೇತನಕ್ಕೆ ಪಟ್ಟು

ಶಿಡ್ಲಘಟ್ಟ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳು ಕಪ್ಪುಪಟ್ಟಿ ಧರಿಸಿ ತಾಲೂಕು ಕಚೇರಿ ಆವರಣದಲ್ಲಿ ಗುರುವಾರ ಮುಷ್ಕರ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಖಜಾಂಚಿ ತ್ರಿಮೂರ್ತಿ ಕಡಿಮನಿ ಮಾತನಾಡಿ, ವಿಎಗಳನ್ನು ತಾಂತ್ರಿಕೇತರ ಸಿಬ್ಬಂದಿಯಾಗಿ ನೇಮಿಸಿದ್ದರೂ ಇತ್ತೀಚಿನ ದಿನಗಳಲ್ಲಿ ತಾಂತ್ರಿಕ ಕಾರ್ಯಭಾರ ಹೆಚ್ಚುತ್ತಿದೆ ಎಂದರು.
ಕಂದಾಯ ಇಲಾಖೆ ಅಭಿವೃದ್ದಿಪಡಿಸಿರುವ ಸಂಯೋಜನೆ, ಇ-ಆಫೀಸ್, ಆಧಾರ್ ಸೀಡ್, ಲ್ಯಾಂಡ್ ಬೀಟ್, ಬಗೈರ್ ಹುಕುಂ, ಪೌತಿ ಆಂದೋಲನ ಆ್ಯಪ್, ಬೆಳೆ ಕಟಾವು ಮೊಬೈಲ್ ಆ್ಯವ್, ನವೋದಯ, ಗರುಡ ಆ್ಯಪ್, ಭೂಮಿ ಇನ್ನಿತರ 21ಕ್ಕೂ ಹೆಚ್ಚು ತಂತ್ರಾಂಶಗಳಿವೆ. ಮೊಬೈಲ್ ಮತ್ತು ವೆಬ್‌ನ ಮೂಲಕವೇ ಈ ಎಲ್ಲ ಆ್ಯಪ್‌ಗಳನ್ನು ನಿರ್ವಹಿಸಬೇಕಿದ್ದು, ಇದು ಕಾರ್ಯಭಾರವನ್ನು ಹೆಚ್ಚಿಸಿದೆ. ಇದರಿಂದ ಮಾನಸಿಕ ಒತ್ತಡ ಹೆಚ್ಚಿ, ಹಲವು ಅನಾಹುತಗಳಿಗೆ ದಾರಿ ಮಾಡಿಕೊಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ನಮಗೂ ತಾಂತ್ರಿಕ ಸಿಬ್ಬಂದಿಗೆ ನೀಡುವಷ್ಟೆ ಸಮಾನ ವೇತನ ಇತರ ಸವಲತ್ತುಗಳನ್ನು ಒದಗಿಸಬೇಕು, ವಂಶವೃಕ್ಷ, ಜಾತಿ ಪ್ರಮಾಣ ಪತ್ರ ನೀಡುವಾಗ ಆಗುವ ದೋಷಗಳಲ್ಲಿ ನಮ್ಮನ್ನು ಹೊಣೆ ಮಾಡುವುದನ್ನು ಬಿಟ್ಟು ತಪ್ಪು ಮಾಹಿತಿ ನೀಡುವ ಅರ್ಜಿದಾರರ ಮೇಲೆ ಕ್ರಮಕೈಗೊಳ್ಳಬೇಕು. ಪದೋನ್ನತಿ ನೀಡುವುದು ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಬಿ.ಎನ್.ಸ್ವಾಮಿ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಸಂಘದ ತಾಲೂಕು ಅಧ್ಯಕ್ಷ ಜಿ.ಎಚ್.ಚೇತನ್ ಕುಮಾರ್, ಗೌರವಾಧ್ಯಕ್ಷ ಎಡ್ವಿನ್ ಲಾರೆನ್ಸ್, ಉಪಾಧ್ಯಕ್ಷ ಎಚ್.ಕೆ.ನಾಗರಾಜ್, ಪ್ರಧಾನ ಕಾರ್ಯದರ್ಶಿ ಬಿ.ವೈ.ಸುರೇಶ್, ಖಜಾಂಚಿ ತ್ರಿಮೂರ್ತಿ ಕಡಿಮನಿ, ಸಂಘಟನಾ ಕಾರ್ಯದರ್ಶಿ ವರಲಕ್ಷ್ಮಿ ಸೇರಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net