ಜಿಲ್ಲೆಯಲ್ಲಿ ಹೆಚ್ಚಿದ ರಸ್ತೆ ಅವಘಡ

Increased road accidents in the district
Published on

ಮಡಿಕೇರಿ:

ಜಿಲ್ಲೆಯ ಹೆದ್ದಾರಿಗಳಲ್ಲಿ ವರ್ಷದಿಂದ ವರ್ಷಕ್ಕೆ ಅಪಘಾತಗಳ ಪ್ರಮಾಣ ಹೆಚ್ಚಾಗುತ್ತಿದೆ. ಅಪಘಾತಗಳಿಂದಾಗಿ ಸಾವಿಗೀಡಾಗುವವರ ಸಂಖ್ಯೆಯೂ ಏರುಗತಿಯಲ್ಲಿದ್ದು, ಸುರಕ್ಷಿತ ಚಾಲನೆಯ ಅಗತ್ಯತೆಯನ್ನು ಒತ್ತಿ ಹೇಳುತ್ತಿದೆ. ಮೈಸೂರಿನಿಂದ ಕರಾವಳಿ ನಗರಿ ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ೨೭೫ ಕೊಡಗಿನ ಮೂಲಕವೇ ಹಾದು ಹೋಗುತ್ತಿದೆ. ಅಂತಾರಾಜ್ಯ ಸಂಪರ್ಕಿಸುವ ಪ್ರಮುಖ ರಾಜ್ಯ ಹೆದ್ದಾರಿಗಳೂ ಜಿಲ್ಲೆಯಲ್ಲಿದ್ದು ಕಳೆದ ಮೂರು ವರ್ಷಗಳಲ್ಲಿ ಇಂಥ ಹೆದ್ದಾರಿಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಒಟ್ಟು ೧೨೮ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಏರು-ತಗ್ಗು, ದೊಡ್ಡ ದೊಡ್ಡ ತಿರುವುಗಳಿಂದ ಕೂಡಿರುವ ಕೊಡಗಿನ ರಸ್ತೆಗಳಲ್ಲಿ ವಾಹನಗಳ ಚಾಲನೆ ದೊಡ್ಡ ಸವಾಲೇ ಸರಿ. ಎಷ್ಟು ಎಚ್ಚರಿಕೆಯಿಂದ ಓಡಿಸಿದರೂ ಅಲ್ಲಲ್ಲಿ ಅಪಾಯಗಳು ಎದುರಾಗುತ್ತಲೇ ಇರುತ್ತದೆ. ಜಿಲ್ಲೆಯ ಮೂಲಕ ರಾಷ್ಟ್ರೀಯ ಹೆದ್ದಾರಿ ೨೭೫, ರಾಜ್ಯ ಹೆದ್ದಾರಿಗಳು ಹಾದು ಹೋಗಿದ್ದರೂ ಅವು ಹೆಸರಿಗಷ್ಟೇ ಹೆದ್ದಾರಿ ಅನ್ನಿಸಿಕೊಂಡಿವೆ. ಇವುಗಳ ಅಗಲ ಕಡಿಮೆ ಇದ್ದು, ಸಾಮಾನ್ಯ ಜಿಲ್ಲಾ ರಸ್ತೆಗಳಂತೆಯೇ ಕಂಡುಬರುತ್ತದೆ. ಇದಕ್ಕೆ ಇಲ್ಲಿನ ಭೌಗೋಳಿಕ ವಾತಾವರಣವೂ ಒಂದು ಕಾರಣವಾಗಿದ್ದು, ವಾಹನಗಳ ದಟ್ಟಣೆ ಹೆಚ್ಚುತ್ತಿದ್ದಂತೆಯೇ ರಸ್ತೆ ವಿಸ್ತರಣೆಯ ಅಗತ್ಯತೆಯ ಕೂಗು ಕೂಡ ಕೇಳಿಬರುತ್ತಿದೆ.

ಜಿಲ್ಲೆಯಲ್ಲಿ ಹೆಚ್ಚಾಗುತ್ತಿರು ಅಪಘಾತಗಳ ಪ್ರಮಾಣವೂ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸುವುದಕ್ಕೆ ಇದು ಸಕಾಲ ಎನ್ನುವ ಅಂಶವನ್ನು ಎತ್ತಿ ಹಿಡಿಯುತ್ತಿದೆ. ಕೊಡಗಿನಲ್ಲಿ ೨೦೧೮ರಲ್ಲಿ ವಿವಿಧ ಮಾದರಿಯ ಒಟ್ಟು ೫೪೬ ರಸ್ತೆ ಅಪಘಾತಗಳು ಸಂಭವಿಸಿದ್ದು ೭೫ ಜನ ಪ್ರಾಣ ಕಳೆದುಕೊಂಡಿದ್ದಾರೆ. ೭೨೪ ಪ್ರಯಾಣಿಕರು ಗಾಯಗೊಂಡಿದ್ದಾರೆ. ೨೦೧೯ರಲ್ಲಿ ೪೬೯ ಅಪಘಾತಗಳು ನಡೆದಿದ್ದು ೮೭ ಸಾವುಗಳಾಗಿದೆ. ೬೧೨ ಜನರಿಗೆ ಗಾಯಗಳಾಗಿದೆ. ೨೦೨೦ರಲ್ಲಿ ೩೮೬ ಅಪಘಾತಗಳು ಆಗಿದ್ದು ೬೦ ಪ್ರಯಾಣಿಕರು ಮೃತಪಟ್ಟಿದ್ದಾರೆ. ೪೮೯ ಜನರಿಗೆ ಗಾಯಗಳಾಗಿದೆ. ೨೦೨೧ರಲ್ಲಿ ೪೮೦ ಅಪಘಾತಗಳು ಸಂಭವಿಸಿದ್ದು ೬೬ ಸಾವುಗಳು ಆಗಿದೆ. ೪೮೭ ಪ್ರಯಾಣಿಕರು ಗಾಯಗೊಂಡಿದ್ದಾರೆ. ೨೦೨೨ರಲ್ಲಿ ನಡೆದ ೪೪೮ ಅಪಘಾತಗಳಲ್ಲಿ ೬೬ ಜನರು ಸಾವನ್ನಪ್ಪಿದ್ದು ೬೧೮ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಕೇವಲ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಮಾತ್ರ ನಡೆದ ಅಪಘಾತಗಳಲ್ಲಿ ಕಳೆದ ೩ ವರ್ಷಗಳಲ್ಲಿ ಒಟ್ಟು ೧೨೮ ಜನರು ಸಾವಿಗೀಡಾಗಿದ್ದಾರೆ. ಜಿಲ್ಲೆಯ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತಗಳಲ್ಲಿ ೨೦೨೦ರಲ್ಲಿ ೧೨, ೨೦೨೧ರಲ್ಲಿ ೧೫ ಹಾಗೂ ೨೦೨೨ರಲ್ಲಿ ೧೬ ಜನ ಪ್ರಾಣ ಕಳೆದುಕೊಂಡಿದ್ದಾರೆ. ಕೊಡಗಿನಲ್ಲಿ ಇರುವ ರಾಜ್ಯ ಹೆದ್ದಾರಿಗಳಲ್ಲಿ ೨೦೨೦ರಲ್ಲಿ ಸಂಭವಿಸಿದ ಅಪಘಾತಗಳಲ್ಲಿ ೩೨, ೨೦೨೧ರಲ್ಲಿ ೨೫ ಹಾಗೂ ೨೦೨೨ರಲ್ಲಿ ೨೮ ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ.

ಹೆದ್ದಾರಿಗಳಲ್ಲಿ ಸಂಭವಿಸುವ ಬಹುತೇಕ ಅಪಘಾತಗಳಿಗೆ ಚಾಲಕನ ಲೋಪವೇ ಕಾರಣ ಎನ್ನುವುದನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕಳೆದ ತಿಂಗಳು ಬಿಡುಗಡೆ ಮಾಡಿರುವ ’ಭಾರತದಲ್ಲಿ ರಸ್ತೆ ಅಪಘಾತಗಳು-೨೦೨೨’ ವರದಿಯಲ್ಲಿ ಹೇಳಲಾಗಿದೆ. ಅತಿ ವೇಗದ ಚಾಲನೆ, ಅಪಾಯಕಾರಿ ಸ್ಥಳಗಳಲ್ಲಿ ವೇಗ ಮಿತಿ ನಿಗದಿ ಮಾಡಿದ್ದರೂ ನಿರ್ಲಕ್ಷ್ಯ, ತಿರುವುಗಳಲ್ಲಿ ಬೇಜವಾಬ್ದಾರಿ ಚಾಲನೆ.. ಹೀಗೆ ಹಲವು ವಿಷಯಗಳಿಂದಲೂ ಅಪಘಾತಗಳು ಉಂಟಾಗುತ್ತಿರುತ್ತವೆ. ಹೆದ್ದಾರಿಗಳ ದುಸ್ಥಿತಿ, ಸೂಕ್ತ ರೀತಿಯಲ್ಲಿ ಸೂಚನಾ ಫಲಕಗಳು ಅಳವಡಿಸದಿರುವುರಿಂದಲೂ ಅಪಘಾತಗಳು ಸಂಭವಿಸುತ್ತವೆ ಎನ್ನುವುದು ಕೂಡ ಕಂಡು ಬಂದಿದೆ.

ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಬಹುತೇಕ ಅಪಘಾತಗಳನ್ನು ತಪ್ಪಿಸಬಹುದು. ಒಂದು ವೇಳೆ ಅಪಘಾತಗಳಾದರೂ ಪ್ರಾಣಾಪಾಯದಿಂದ ಪಾರಾಗುವ ಸಾಧ್ಯತೆಗಳು ಹೆಚ್ಚು ಇರುತ್ತದೆ ಎನ್ನುತ್ತಾರೆ ಪೊಲೀಸರು. ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ, ಸೀಟ್ ಬೆಲ್ಟ್ ಬಗ್ಗೆ ನಿರ್ಲಕ್ಷ್ಯವೂ ಪ್ರಾಣಕ್ಕೆ ಸಂಚಕಾರ ತರಬಹುದು. ಪಥ ಶಿಸ್ತು ಪಾಲಿಸದಿರುವುದು, ರಾತ್ರಿಯ ವೇಳೆ ಪ್ರಕಾಶಮಾನವಾದ ಹೆಡ್‌ಲೈಟ್ ಬಳಸುವುದು, ಹೆಡ್‌ಲೈಟ್‌ಗಳ ಡಿಮ್-ಡಿಪ್ ಮಾಡದಿರುವುದು ಕೂಡ ಹೆದ್ದಾರಿಗಳಲ್ಲಿ ಎದುರಿನಿಂದ ಬರುತ್ತಿರುವವರ ಪ್ರಾಣ ತೆಗೆಯುವ ಸಾಧ್ಯತೆ ಇರುತ್ತದೆ.
ಕೆಎಸ್‌ಆರ್‌ಟಿಸಿ ಮತ್ತು ಪ್ರವಾಸಿ ಬಸ್‌ಗಳ ಕೆಲವು ಚಾಲಕರ ಉದ್ಧಟತನದ ವರ್ತನೆಯೂ ಹೆದ್ದಾರಿಗಳಲ್ಲಿನ ಅಪಘಾತಕ್ಕೆ ಮತ್ತೊಂದು ಕಾರಣವಾಗಿದೆ. ಇದಲ್ಲದೆ ಕೆಎಸ್‌ಆರ್‌ಟಿಸಿಯಲ್ಲಿ ಹಳೆಯ ಮತ್ತು ನಿರ್ವಹಣೆ ಇಲ್ಲದ ಬಸ್‌ಗಳ ಬಳಕೆಯಿಂದಲು ಅಪಘಾತಗಳು ಸಂಭವಿಸುತ್ತಿದೆ. ಕೆಲವು ಬಸ್‌ಗಳು ರಸ್ತೆಯಲ್ಲಿ ಓಡುವ ಅರ್ಹತೆಯನ್ನು ಕಳೆದುಕೊಂಡಿದ್ದರೂ ಮತ್ತೆ ಮತ್ತೆ ಬಳಸಲಾಗುತ್ತಿದೆ. ಹಳೆಯ ಟೈರ್‌ಗಳ ಬಳಕೆ, ಹಳೆಯ ಬಿಡಿಭಾಗಗಳ ಮರುಬಳಕೆ ಸಾಮಾನ್ಯವಾಗಿದೆ.

ಕೊಡಗಿನಲ್ಲಿ ಬೆಟ್ಟ-ಗುಡ್ಡಗಳ ಮೂಲಕ ನಿರ್ಮಾಣ ಆಗಿರುವ ಎತ್ತರ, ತಗ್ಗು, ತಿರುವುಗಳಿಂದ ಕೂಡಿರುವ ರಸ್ತೆಗಳಲ್ಲಿ ಎಷ್ಟು ಎಚ್ಚರಿಕೆಯಿಂದ ಚಾಲನೆ ಮಾಡಿದರೂ ಅದು ಕಡಿಮೆಯೇ ಆಗಿರುತ್ತದೆ. ಅನುಭವಿ ಹಿರಿಯ ಚಾಲಕರು ಹೇಳುವ ಪ್ರಕಾರ ’ಮೈಯೆಲ್ಲಾ ಕಣ್ಣಾಗಿ’ ಇಲ್ಲಿ ವಾಹನಗಳನ್ನು ಓಡಿಸಬೇಕಾಗುತ್ತದೆ. ಜಿಲ್ಲೆಯ ಹಲವೆಡೆ ಕಂಡುಬರುವ ಮಂಜು ಮುಸುಕಿದ ವಾತಾವರಣವೂ ಅಪಘಾತಗಳ ಸಂಖ್ಯೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಕೊಡಗಿನಲ್ಲಿ ಅಪಘಾತಗಳ ಸಂಖ್ಯೆ ಜಾಸ್ತಿ ಆಗುವಲ್ಲಿ ಇಲ್ಲಿಗೆ ಆಗಮಿಸುವ ಪ್ರವಾಸಿಗರ ಕೊಡುಗೆಯೂ ಸಾಕಷ್ಟಿದೆ. ಇಲ್ಲಿನ ತಿರುವು ರಸ್ತೆಗಳು, ಅಪಾಯಕಾರಿ ಜಾಗದ ಅರಿವು ಇರದ ಪ್ರವಾಸಿಗರು ವಿಸ್ತಾರವಾದ ಹೆದ್ದಾರಿಗಳಲ್ಲಿ ಓಡಿಸಿದಂತೆ ವಾಹನ ಚಾಲಿಸಿ ಅಪಘಾತಗಳಿಗೆ ಕಾರಣರಾಗುತ್ತಿದ್ದಾರೆ. ಕಳೆದ ೫ ವರ್ಷಗಳಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಒಟ್ಟು ೨,೩೨೯ ಅಪಘಾತಗಳು ಮತ್ತು ಇದರಲ್ಲಿ ಮೃತಪಟ್ಟ ೩೫೪ ಜನರ ಪೈಕಿ ಶೇ. ೭೫ ಪ್ರಕರಣಗಳು ಪ್ರವಾಸಿಗರಿಗೆ ಸಂಬಂಧಿಸಿದ್ದು ಎನ್ನುತ್ತದೆ ಅಂಕಿ-ಅಂಶಗಳು.

ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಯ ನಿರ್ವಹಣೆ, ನವೀಕರಣ, ಉನ್ನತೀಕರಣ, ಅಭಿವೃದ್ಧಿಗಾಗಿ ಒದಗಿಸಲಾದ ಅನುದಾನದಲ್ಲಿ ರಸ್ತೆಯಲ್ಲಿ ಅಗತ್ಯವಿರುವ
ಕಪ್ಪು ಸ್ಥಳಗಳ ಅಭಿವೃದ್ಧಿ, ಅಗತ್ಯ ಸೂಚನಾ ಫಲಕಗಳನ್ನು ಅಳವಡಿಸುವುದು ಇತ್ಯಾದಿ ಅಂಶಗಳನ್ನು ಅಂದಾಜು ಪಟ್ಟಿಯಲ್ಲಿ ಅಳವಡಿಸಿಕೊಂಡು ರಸ್ತೆ ಸುರಕ್ಷತಾ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ರಾಜ್ಯ ಸರ್ಕಾರ ಕಪ್ಪು ಸ್ಥಳಗಳನ್ನು ಗುರುತಿಸಲು ಹಾಗೂ ಕ್ರಿಯಾ ಯೋಜನೆಯನ್ನು ರೂಪಿಸಲು ಪ್ರೋಟೋಕಾಲ್ ಜಾರಿಗೆ ತಂದಿರುತ್ತದೆ. ರಸ್ತೆ ಸುರಕ್ಷತಾ ಕಾಮಗಾರಿಗಳನ್ನು ಕೈಗೊಳ್ಳಲು
ಆಯವ್ಯಯದಲ್ಲಿ ಪ್ರತ್ಯೇಕ ಲೆಕ್ಕಶೀರ್ಷಿಕೆ ಕರ್ನಾಟಕ ರಾಜ್ಯ ಸುರಕ್ಷತಾ ನಿಧಿಯಿಂದ ಅನುದಾನ ನಿರ್ವಹಣಾ ವೆಚ್ಚ ಸೃಜಿಸಲಾಗಿದ್ದು, ಪ್ರತಿ ವರ್ಷ ಈ ಲೆಕ್ಕಶೀರ್ಷಿಕೆಯಡಿ ಲಭ್ಯವಾಗುವ ಅನುದಾನದಲ್ಲಿಯೂ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ರಸ್ತೆ ಸುರಕ್ಷತಾ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.
ಸತೀಶ್ ಜಾರಕಿಹೊಳಿ, ಲೋಕೋಪಯೋಗಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net