ಹೆಚ್ಚಿದ ಹಾಲು ಉತ್ಪಾದನಾ ವೆಚ್ಚ, ಖರೀದಿ ದರ ರೂ.3 ಹೆಚ್ಚಿಸಲು ತೀರ್ಮಾನ

KMF
ವಿಜಯಪುರ-ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಆಡಳಿತ ಕಚೇರಿ.
Published on

ವಿಜಯಪುರ: ಜಾನುವಾರುವಿಗೆ ಮೇವಿನ ಅಭಾವ, ಚರ್ಮಗಂಟು ರೋಗ, ಪಶು ಆಹಾರದ ಬೆಲೆ ಹೆಚ್ಚಳ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಹೈನುಗಾರರು ಹೈರಾಣಾಗಿದ್ದು, ಹಾಲು ಉತ್ಪಾದನೆಯಿಂದ ವಿಮುಖರಾಗುತ್ತಿದ್ದಾರೆ. ಹೀಗಾಗಿ ಹಾಲು ಉತ್ಪಾದನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರ ಹಾಲಿನ ಖರೀದಿ ದರದಲ್ಲಿ ರೂ.3 ಹೆಚ್ಚಿಸಲು ತೀರ್ಮಾನಿಸಿದೆ.

ಜು. 21 ರಂದು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇಂಥದ್ದೊಂದು ನಿರ್ಣಯ ಕೈಗೊಳ್ಳಲಾಗಿದ್ದು, 2023 ಆ. 1ರಿಂದ ಪ್ರತಿ ಲೀಟರ್ ಹಾಲಿನ ದರ ರೂ.3ಕ್ಕೆ ಹೆಚ್ಚಿಸಲು ಸಮ್ಮತಿಸಲಾಗಿದೆ. ಈ ಹಣ ನೇರವಾಗಿ ಹಾಲು ಉತ್ಪಾದಕರ ಕೈಸೇರಲಿರುವುದು ಸಂತಸದ ವಿಚಾರ ಎಂದು ವಿಜಯಪುರ-ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ತಿಳಿಸಿದೆ.

ವಿಜಯಪುರ-ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಕಳೆದ 37 ವರ್ಷಗಳಿಂದ ತನ್ನ ವ್ಯಾಪ್ತಿಯಲ್ಲಿರುವ 481 ಪ್ರಾಥಮಿಕ ಹಾಲು ಸಹಕಾರ ಸಂಘಗಳೊಂದಿಗೆ ಅವಳಿ ಜಿಲ್ಲೆಗಳಲ್ಲಿನ 19937 (ಹಾಲು ಪೂರೈಸುವವರು) ಹೈನುಗಾರರಿಂದ ಹಾಲು ಖರೀದಿಸಿ, ಸಂಸ್ಕರಿಸಿ ‘ಗೋವಿನಿಂದ ಗ್ರಾಹಕರವರೆಗೆ’ ಎಂಬ ಶೀರ್ಷಿಕೆ ಹೊತ್ತು ನಂದಿನಿ ಬ್ರ್ಯಾಂಡ್‌ನಲ್ಲಿ ಉತ್ಕೃಷ್ಟ ಗುಣಮಟ್ಟದ ವಿವಿಧ ಮಾದರಿಯ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗ್ರಾಹಕರ ಅಭಿರುಚಿಗೆ ತಕ್ಕಂತೆ ಪರಿಚಯಿಸುತ್ತಿದೆ. ನಂದಿನಿ ಕರ್ನಾಟಕ ರಾಜ್ಯದ ಮನೆ ಮಾತಾಗಿರುವ ಬ್ರ್ಯಾಂಡ್ ಆಗಿರುವುದಲ್ಲದೇ, ರಾಷ್ಟ್ರಾದ್ಯಂತ ಗ್ರಾಹಕರು ಗುರುತಿಸಿರುವ ಪ್ರತಿಷ್ಠಿತ ಹಾಲಿನ ಬ್ರಾೃಂಡ್ ಆಗಿ ಹೊರಹೊಮ್ಮಿದೆ.
ಆದರೆ, ಹಲವು ಸಮಸ್ಯೆಗಳಿಂದಾಗಿ ಹಾಲಿನ ಉತ್ಪಾದನೆ ಕುಂಠಿತಗೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹಾಲಿನ ಶೇಖರಣೆ ದಿನವಹಿ 1.66 ಲಕ್ಷ ಲೀಟರ್‌ಗಳಿಂದ 1.34 ಲಕ್ಷ ಲೀಟರ್‌ಗಳಿಗೆ ಇಳಿಕೆಯಾಗಿದೆ. ದಿನವಹಿ ಅಂದಾಜು 32 ಸಾವಿರ ಲೀಟರ್ ಉತ್ಪಾದನೆ ಕಡಿಮೆಯಾಗಿದೆ. ಹೀಗಾಗಿ ಉತ್ಪಾದನೆ ದರ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಸರ್ಕಾರ ಸಮ್ಮತಿಸಿರುವುದು ಆಶಾದಾಯಕ ಬೆಳವಣಿಗೆ ಎಂದು ಒಕ್ಕೂಟದ ಅಧ್ಯಕ್ಷ ಭೀಮಾ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net